ಹಕ್ಕಿ-ಪಿಕ್ಕಿ ಕ್ಯಾಂಪ್ನಲ್ಲಿ ಮತ ಜಾಗೃತಿ
ಶಿವಮೊಗ್ಗ: ಶಿವಮೊಗ್ಗ ತಾಲೂಕು ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಾಶಿವಪುರ ಗ್ರಾಮ (ಹಕ್ಕಿ-ಪಿಕ್ಕಿ ಕ್ಯಾಂಪ್) ನಲ್ಲಿ ಗುರುವಾರ ಮತದಾನ ಜಾಗೃತಿ ನಡೆಯಿತು.
ಆಶ್ರಮ ಶಾಲಾ ಮಕ್ಕಳು ಮತದರರ ಜಾಗೃತಿ ಜಾಥಾ ನಡೆಸಿದರು. ನಂತರ ನಡೆದ ಸಭೆಯಲ್ಲಿ ಮತದಾನದ ಮಹತ್ವದ ಕುರಿತಂತೆ ಅರಿವು ಮೂಡಿಸಲಾಯಿತು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎನ್. ಬಾಲರಾಜ್ ಮಾತನಾಡಿ, ಏ.17ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಮತದಾನ ಬೆಳಗ್ಗೆ 7ರಿಂದ ಸಂಜೆ 5ರ ಬದಲಾಗಿ 6 ಗಂಟೆ ವರೆಗೂ ವಿಸ್ತರಿಸಿ ಸಮಯಾವಕಾಶ ಕಲ್ಪಿಸಿರುವುದರಿಂದ ಮತದಾರರಿಗೆ ತಮ್ಮ ಮತ ಚಲಾಯಿಸಲು ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಿದರು.
ಹಕ್ಕಿ-ಪಿಕ್ಕಿ ಸಮುದಾಯದ ಪ್ರತಿನಿಧಿ ರಾಜು ಅವರು ಮಾತನಾಡಿ, ದೇಶದ ಅಭಿವೃದ್ಧಿಗೆ ಸುಭದ್ರ ಸರ್ಕಾರದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮದ ಎಲ್ಲಾ ಮತದಾರರು ಶೇ.100ರಷ್ಟು ಮತದಾನಕ್ಕೆ ಬದ್ಧರಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಪ್ರಸಕ್ತ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಗಿದೆ. ವ್ಯಾಪಾರ ನಿಮಿತ್ತ ನೆರೆ ಊರುಗಳಿಗೆ ಹೋಗಿರುವವರಿಗೂ ಚುನಾವಣೆ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದು, ಪೂರ್ಣ ಪ್ರಮಾಣದಲ್ಲಿ ಎಲ್ಲರೂ ಮತ ಚಲಾಯಿಸಲಿದ್ದಾರೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು, ಸಮನ್ವಯ ಸಂಸ್ಥೆಯ ಮುಖ್ಯಸ್ಥ ಕಾಶಿನಾಥ್ ಮತ್ತಿತರರು ಉಪಸ್ಥಿತರಿದ್ದರು.