ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗೀತಾ ಗಾಯನದಲ್ಲಿ ಗೆಲವಿನ ಅಪಸ್ವರ

Mainashree
Updated On : 12 Apr 2014, 11:03 am

ವಿಶೇಷ ವರದಿ
ಶಿವಮೊಗ್ಗ:  ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಹೊರಟ ಜೆಡಿಎಸ್ ಪಾಳೆಯದಲ್ಲೀಗ ತಳಮಳ ಆರಂಭವಾಗಿದೆ.
ಚುನಾವಣೆಯ ಬಹಿರಂಗ ಪ್ರಚಾರಕ್ಕಿರುವುದು ಇನ್ನು 4-5 ದಿನ ಬಾಕಿಯಷ್ಟೆ. ಈ ಸಂದರ್ಭ ಕಿಮೋಥೆರಪಿ ಪಡೆದುಕೊಳ್ಳುತ್ತಿರುವ ಶಕುಂತಲಾ ಬಂಗಾರಪ್ಪ ಅವರನ್ನು ಕರೆ ತಂದು ಮತ ಕ್ರೋಢೀಕರಣಕ್ಕೆ ಮುಂದಾಗಿದೆ. ಈ ಮಧ್ಯೆಯೇ ಅನೇಕ ಸಂಗತಿಗಳು ಪಕ್ಷದ ಮುಖಂಡರ ಆತ್ಮವಿಶ್ವಾಸವನ್ನು ಕದಡಲಿದೆ.
ಸಂದೇಶದ ಸುಳಿವಿಲ್ಲ:  ಗೀತಾ ಶಿವರಾಜ್‌ಕುಮಾರ್ ಜೆಡಿಎಸ್ ಅಭ್ಯರ್ಥಿ ಆಗುವ ವಿಚಾರದಲ್ಲಿ ಡಾ. ರಾಜ್ ಕುಟುಂಬದ ಒಪ್ಪಿಗೆ ಇಲ್ಲ ಎಂದು ನಾಮಪತ್ರ ಸಲ್ಲಿಕೆ ದಿನದಿಂದಲೇ ಚರ್ಚೆಗೆ ಬಂದ ವಿಚಾರ.
ನಾಮಪತ್ರ ಸಲ್ಲಿಕೆ ಮುಂಚಿತವಾಗಿ ಒಂದಷ್ಟು ಘಟನೆಗಳು ನಡೆದು, ಡಾ.ರಾಜ್ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ರಾಜ್ ಆಶಯಕ್ಕೆ ಧಕ್ಕೆ ಆಗುತ್ತದೆ ಎಂಬ ಮಾತು ಹಾಗೂ ಸ್ಪರ್ಧಿಸದಂತೆ ಒತ್ತಡ ಸಹ ಬಂದಿತ್ತು.
ಆದರೆ, ಅದೆಲ್ಲವನ್ನೂ ಮೀರಿ ಕಣಕ್ಕಿಳಿದ ಗೀತಾ ಮುಂದಿನ ದಿನಗಳಲ್ಲಿ ರಾಜ್ ಕುಟುಂಬದಿಂದ ಬೆಂಬಲದ ಸಂದೇಶ ಬರಬಹುದು ಎಂದು ನಿರೀಕ್ಷಿಸಿದ್ದರು.
ಪ್ರಯತ್ನ ಕೂಡ ನಡೆಸಿದ್ದರು. ನಟ ಪುನೀತ್ ರಾಜ್‌ಕುಮಾರ್ ಪ್ರಚಾರಕ್ಕೆ ಕರೆ ತರುವ ಪ್ರಯತ್ನಗಳೂ ನಡೆದಿದ್ದು, ಅದೂ ಕೂಡ ವಿಫಲವಾಗಿದ್ದು ಪಕ್ಷದ ನಾಯಕರನ್ನು ಕಂಗೆಡಿಸಿತ್ತು.
ಇಷ್ಟರ ಮಧ್ಯೆ ಗೀತಾ ಬೆಂಬಲಿಸಿ ರಾಜ್ ಕುಟುಂಬದಿಂದ ಸಂದೇಶ ಬರಬಹುದು ಎಂದು ಪಕ್ಷ ನಿರೀಕ್ಷಿಸಿತ್ತು. ರಾಜ್‌ಕುಮಾರ್ ಅಭಿಮಾನಿಗಳು ಸಹ ನಿರೀಕ್ಷಿಸಿದ್ದರು. ಆದರೀಗ ಚುನಾವಣೆಯ ಅಂತಿಮ ಹಂತ ತಲುಪಿದೆ. ಆದರೇ ನಿರೀಕ್ಷೆ ಸುಳ್ಳಾಗಿದೆ.
ನಗರ ಪ್ರದೇಶದಲ್ಲಿ ಪ್ರಚಾರವಿಲ್ಲ:  ಮನೆ ಮನೆ ಪ್ರಚಾರ ಹಾಗೂ ಮತದಾರರನ್ನು ನೇರವಾಗಿ ತಲುಪ ವಿಚಾರದಲ್ಲಿ ಜೆಡಿಎಸ್ ಹಿಂದೆ ಬಿದ್ದಿರುವುದು ಪಕ್ಷ ಸಂಘಟನೆಯನ್ನು ಕಂಗೆಡಿಸಿದೆ. ನಾಮಪತ್ರ ಸಲ್ಲಿಸಿದಾಗಿನಿಂದ ಇಲ್ಲಿಯವರೆಗೆ ಸಿನಿ ತಾರೆಯರ ಪ್ರಚಾರ ಸುದ್ದಿಗೋಷ್ಠಿ ಹೊರತಾಗಿ ಯಾವುದೇ ಹಂತದ ಪ್ರಚಾರಗಳು ನಡೆದಿಲ್ಲ.
ಚಿತ್ರ ನಟ ಪ್ರೇಮ್, ಯೋಗೀಶ್, ಉಪೇಂದ್ರ, ನಟಿ ಅಮೂಲ್ಯ ಈಗಾಗಲೇ ಗೀತಾ ಪರ ಮತಯಾಚಿಸಿದ್ದಾರೆ. ಮತ್ತೊಂದು ಕಡೆ ನಟ ಶಿವರಾಜ್‌ಕುಮಾರ್ ಪತ್ನಿ ಪರ ಮತಯಾಚಿಸುತ್ತಿದ್ದಾರೆ. ಇನ್ನಷ್ಟು ಹಿರಿಕಿರಿ ನಟರನ್ನು ಕರೆತಂದು ಮತದಾರರನ್ನು ಸೆಳೆಯುವ ಪ್ರಯತ್ನ ಮಾತ್ರ ನಡೆಯುತ್ತಿದೆ.
ವಿಶೇಷವೆಂದರೆ, ಗ್ರಾಮೀಣ ಭಾಗದ ಮತದಾರರನ್ನು ಸೆಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಮಾತು ಪಕ್ಷದೊಳಗಿದೆ. ನಗರ ಪ್ರದೇಶದಲ್ಲಿ ಚಿತ್ರ ನಟರು ಸುತ್ತಾಡಿ ಮತಯಾಚನೆ ಹೊರತಾಗಿ ಯಾವುದೇ ರಾಜಕೀಯ ಪ್ರಚಾರಗಳು ನಡೆದಿಲ್ಲ.
ಉಳಿದಿರುವ ನಾಲ್ಕಾರು ದಿನದಲ್ಲಿ ಮನೆ ಮನೆಗೆ ಕರಪತ್ರಗಳನ್ನು ತಲುಪಿಸುವುದು ಅಷ್ಟು ಸುಲಭದ ಕೆಲಸವಲ್ಲ.
ಕುಮಾರ್ ಬಂಗಾರಪ್ಪ ಕಿಚ್ಚು:  ಪಕ್ಷದೊಳಗಿನ ಈ ಎಲ್ಲಾ ಬೆಳವಣಿಗೆಯ ನಡುವೆಯೇ ಕಾಂಗ್ರೆಸ್ ಮುಖಂಡ ಹಾಗೂ ಗೀತಾ ಸಹೋದರ ಕುಮಾರ್ ಬಂಗಾರಪ್ಪ ಅವರ ಕಿಚ್ಚು ಜೆಡಿಎಸ್ ಪ್ರಭಾವವನ್ನು ಒಂದಷ್ಟು ಘಾಸಿಗೊಳಿಸಿದ್ದು ಸುಳ್ಳಲ್ಲ. ಗೀತಾ ಅವರಿಗೆ ಚುನಾವಣೆ ಸಂದರ್ಭ ರಾಜ್ ಕುಟುಂಬದ ಬೆಂಬಲವಿಲ್ಲ ಎಂಬ ಹೇಳಿಕೆ, ಶರಾವತಿ ಡೆಂಟಲ್ ಕಾಲೇಜಿನ ಆಸ್ತಿ ಈಡಿಗ ಸಮಾಜದ ಆಸ್ತಿಯಾಗಿದೆ. ಅದನ್ನು ಸೈಟ್ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಸಿಎಂಗೆ ದೂರು ಸಲ್ಲಿಸುತ್ತಿರುವ ವಿಚಾರ ಕೂಡ ಜೆಡಿಎಸ್ ನಾಗಾಲೋಟಕ್ಕೆ ಕಡಿವಾಣ ಹಾಕಿದಂತಾಗಿದೆ.
ಇನ್ನೂ ಪ್ರಮುಖವಾಗಿ ಶಿವಮೊಗ್ಗಕ್ಕೆ ನಾವೇನು ಮಾಡುತ್ತೇವೆ ಎಂದು ಜೆಡಿಎಸ್ ಸ್ಪಷ್ಟಪಡಿಸಿಲ್ಲ. ಶಿವಮೊಗ್ಗ ಜಿಲ್ಲೆಯ ಸಮಸ್ಯೆ ಹಾಗೂ ಅದರ ನಿವಾರಣೆ ಕುರಿತಂತೆ ಪಕ್ಷಕ್ಕಿರುವ ಚಿಂತನೆಗಳನ್ನು ಜನರ ಮುಂದಿಡಲು ವಿಫಲವಾಗಿರುವುದು ಪಕ್ಷಕ್ಕೆ ಮುಳುವಾಗುವ ಸ್ಥಿತಿ ನಿರ್ಮಾಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement