ಬಂಗಾರಪ್ಪಗೆ ಕಾಂಗ್ರೆಸ್ ನೀಡಿದ ನೆರವು ಮರೆತ ಗೀತಾ: ಮಂಜುನಾಥ
ಕ.ಪ್ರ.ವಾರ್ತೆ, ತ್ಯಾಗರ್ತಿ, ಏ. 12
ಕಳೆದ ಚುನಾವಣೆಯಲ್ಲಿ ನನ್ನ ತಂದೆಯನ್ನು ಸೋಲಿಸಿದ್ದೀರಿ, ಈಗ ನಮ್ಮನ್ನು ಗೆಲ್ಲಿಸಿ ಅವರ ಆತ್ಮಕ್ಕೆ ಶಾಂತಿ ನೀಡಿ ಎಂದು ಗೀತಾ ಶಿವರಾಜಕುಮಾರ್ ಗೋಗರೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುತ್ತಾ ಹೋದರೆ ಸಾಮಾನ್ಯ ಜನರಾದ ನಾವು, ನೀವು ಅಧಿಕಾರ ಮಾಡುವುದು ಯಾವಾಗ ಎಂದು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಪ್ರಶ್ನಿಸಿದರು.
ಸಾಗರ ತಾಲೂಕಿನ ಹೊಸಂತೆ ಹಾಗೂ ತ್ಯಾಗರ್ತಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಗೀತಾ ಅವರು ಮಾಜಿ ಸಿಎಂ ಬಂಗಾರಪ್ಪ ಹೆಸರಿನ ಮೇಲೆ ಮತ ಕೇಳುತ್ತಿದ್ದಾರೆ. ಆದರೆ ಬಂಗಾರಪ್ಪ ಅವರನ್ನು ರಾಜ್ಯದಲ್ಲಿ ಮಂತ್ರಿ, ಮುಖ್ಯಮಂತ್ರಿ ಮತ್ತು ಸಂಸತ್ ಸದಸ್ಯರಾಗಲು ಅವಕಾಶ ನೀಡಿರುವುದು ಕಾಂಗ್ರೆಸ್ ಎಂಬುದನ್ನು ಇವರು ಮರೆತಿದ್ದಾರೆ ಎಂದು ಟೀಕಿಸಿದರು.
ಮರೆಯಬಾರದು: ಹಿಂದೆ 1983ರಲ್ಲಿ ಬಂಗಾರಪ್ಪ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ದೇವೇಗೌಡರು ತಪ್ಪಿಸಿದರು.
ಕುಮಾರ ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷದಿಂದಲೇ ಶಾಸಕ, ಮಂತ್ರಿಯಾಗಿ ಆಯ್ಕೆಯಾಗಲು ಅವಕಾಶ ನೀಡಿತು. ಇದನ್ನು ಆ ಕುಟುಂಬದವರು ಮರೆಯಬಾರದು ಎಂದ ಭಂಡಾರಿ ಅವರು, ಕಳೆದ 2008ರ ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪ ಅವರು ಅತ್ಯಂತ ಕಷ್ಟಕಾಲದಲ್ಲಿದ್ದರು.
ಅವರಿಗೆ ಆರೋಗ್ಯ ಸರಿಯಿರಲಿಲ್ಲ ಆ ಸಂದರ್ಭ ಗೀತಾ ಶಿವರಾಜ್ಕುಮಾರ್ ಹಾಗೂ ನಟ ಶಿವರಾಜಕುಮಾರ್ ಜಿಲ್ಲೆಯಲ್ಲಿ ಬಂಗಾರಪ್ಪನವರ ಪರ ಸಭೆ ನಡೆಸಿ ಹಾಡು ಹೇಳಿ ಪ್ರಚಾರ ಕೈಗೊಂಡಿದ್ದರೆ ಅವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದರು ಎಂದರು.
ಹಕ್ರೆ ಮಲ್ಲಿಕಾರ್ಜುನ, ಭೀಮನೇರಿ ಶಿವಪ್ಪ, ಹೊಳಿಯಪ್ಪ, ಖಂಡಿಕ ಪ್ರಭಾಕರ್ ರಾವ್, ದಳವಾಯಿ ದಾನಪ್ಪ, ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್ ಗೌಡ ಕೊಪ್ಪ, ಸ್ಥಳೀಯ ಕಾರ್ಯಕರ್ತರಾದ ಟಿ.ರಮೇಶ್ ಹೊಸಂತೆ, ಪ್ರಸಾದ್ಗೌಡ ವೀರಾಪುರ ಇನ್ನಿತರರು ಉಪಸ್ಥಿತರಿದ್ದರು.