ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಮೋದಿ ಪ್ರಧಾನಿಯಾದರೆ ಮಾತ್ರ ಗಡಿ ಜನರ ರಕ್ಷಣೆ ಸಾಧ್ಯ'

Lingaraj Badiger
Updated On : 13 Apr 2014, 10:48 am

ಕ.ಪ್ರ.ವಾರ್ತೆ, ತ್ಯಾಗರ್ತಿ, ಏ. 12
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶನಿವಾರ ಸಾಗರ ತಾಲೂಕಿನ ವಿವಿಧ ಹಳ್ಳಿಗಳಿಗೆ ತೆರಳಿ ಪ್ರಚಾರ ನಡೆಸಿದರು.
ನೀಚಡಿ, ಅಡ್ಡೇರಿ, ಚಿಕ್ಕ ಬಿಲಗುಂಜಿ ಹಾಗೂ ಹೊಸಂತೆ ಗ್ರಾಮದಲ್ಲಿ ಪ್ರಚಾರ ನಡೆಸಿದ ಗೋಪಾಲಕೃಷ್ಣ ಬೇಳೂರು ಅವರು ಚುನಾವಣೆಯಲ್ಲಿ ಯಡಿಯೂರಪ್ಪನವರನ್ನು ಬೆಂಬಲಿಸಿ, ಗೆಲ್ಲಿಸುವಂತೆ ಕೋರಿದರು.
10 ವರ್ಷದಲ್ಲಿ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ದೇಶದ ಗಡಿಯಲ್ಲಿ ಸೈನಿಕರ ಹತ್ಯೆಯಾದರೂ ಎನೂ ಕ್ರಮ ಕೈಗೊಂಡಿಲ್ಲ. ಗಡಿ ಪ್ರದೇಶದ ಜನರಿಗೆ ಸೂಕ್ತ ರಕ್ಷಣೆ ಸಿಗಬೇಕಾದರೆ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಮಂತ್ರಿ ಆಗಬೇಕು ಎಂದರು.
ಬೆಲೆ ಇಲ್ಲದಂತಾಗಿದೆ:  ಹಿಂದುಳಿದ ವರ್ಗದಿಂದ ಬಂದ ನರೇಂದ್ರ ಮೋದಿ ಅವರು ಗುಜರಾತ್ ಅನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದಾರೆ. ಅದೇ ರೀತಿ ಬಿ.ಎಸ್. ಯಡಿಯೂರಪ್ಪ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ನಮ್ಮ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕಳೆದ 1 ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷಿಸಿದೆ. ರೈತರು ಬೆಳೆದ ಬತ್ತ ಹಾಗೂ ಜೋಳಕ್ಕೆ ಬೆಲೆ ಇಲ್ಲದಂತಾಗಿದೆ ಎಂದರು.
ಹಕ್ಕುಪತ್ರ ವಿತರಿಸಿಲ್ಲ:  ಬೇರೆ ರಾಜ್ಯದಿಂದ ಅಕ್ಕಿ ತರಿಸಿ ಪಡಿತರ ಅಂಗಡಿಗೆ ವಿತರಿಸಲಾಗುತ್ತಿದೆ. ನಮ್ಮ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. 65 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದರೂ ಬಡತನ ನಿರ್ಮೂಲನೆಯಾಗಿಲ್ಲ. ವಿದ್ಯುತ್ ಕೊರತೆ ನೀಗಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಸೋತು ಹೋಗಿದೆ. ಆ ಪಕ್ಷದ ಮುಖಂಡರು ಬೇರೆ ಪಕ್ಷಕ್ಕೆ ಮತ ಹಾಕಿ ಎಂದು ಹೇಳುತ್ತಿದ್ದಾರೆ.
ಕಾಗೋಡು ತಿಮ್ಮಪ್ಪ ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆ ನೀಡಿದ್ದಾರೆ. ನಾನು ಶಾಸಕನಾಗಿದ್ದಾಗ ಮಂಜೂರು ಮಾಡಿದ್ದ 400ಕ್ಕೂ ಹೆಚ್ಚು ಬಗರ್‌ಹುಕುಂ ಹಕ್ಕು ಪತ್ರಗಳು ಇನ್ನೂ ವಿತರಣೆಯಾಗದೇ ಉಳಿದಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಇಂಡೀಕರಣ ಸಮಸ್ಯೆ ಉಲ್ಬಣಿಸಿದ್ದು ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿಲ್ಲ.
ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕನ್ನು ಬದಲಾವಣೆ ತರುವ ಬದಲು ಲಕ್ಷಾಂತರ ರುಪಾಯಿ ಹಗರಣಗಳಿಂದ ಹಣ ಮಾಡಲು ಮುಂದಾಗಿದೆ ಎಂದರು.
ಕಾಂಗ್ರೆಸಿಗರು ಬೆಂಬಲಿಸಿಲಿ:  ಕಾಂಗ್ರೆಸ್ ಪಕ್ಷದವರು ಹಿಂದೊಂದು ದಿನ ಮೇಲ್ವರ್ಗದವರು ಮಾತ್ರ ಬಿಜೆಪಿಯಲ್ಲಿ ಉತ್ತಮ ಸ್ಥಾನಗಳನ್ನು ಪಡೆಯುತ್ತಿದ್ದರು ಎಂದು ಜನರಲ್ಲಿ ತಪ್ಪು ಕಲ್ಪನೆಯ ಬೀಜ ಬಿತ್ತುತ್ತಿದ್ದರು. ಆದರೆ, ಇಂದು ಪಾತ್ರೆ ತೊಳೆಯುವ ಹಿಂದುಳಿದ ವರ್ಗದ ಬಡ ಕುಟುಂಬದಿಂದ ಬಂದ ಮಹಿಳೆಯ ಮಗನಾಗಿ ಜನಿಸಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ನರೇಂದ್ರ ಮೋದಿ ಅವರನ್ನು ಭಾರತೀಯ ಜನತಾ ಪಕ್ಷ ಪ್ರಧಾನಿ ಅಭ್ಯರ್ಥಿಯನ್ನಾಗಿಸಿದೆ. ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸುತ್ತೇವೆ ಎನ್ನುವ ಕಾಂಗ್ರೆಸಿಗರು ನರೇಂದ್ರ ಮೋದಿ ಅವರನ್ನು ಬೆಂಬಲಿಸಲಿ ಎಂದು ಸವಾಲು ಹಾಕಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ನಗರಸಭಾ ಸದಸ್ಯ ಮಂಜುನಾಥ್, ಹಿರೇಬಿಲಗುಂಜಿ ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ ಹೊಸಂತೆ, ಅಶೋಕ ಅಡ್ಡೇರಿ, ಶ್ರೀಧರ ಸಂಪಳ್ಳಿ, ರಾಮಚಂದ್ರ ಹೊಸಂತೆ, ಸುಬ್ರಮಣ್ಯ ಹೊಸಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement