ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
ಕ.ಪ್ರ.ವಾರ್ತೆ ಶಿರಾಳಕೊಪ್ಪ ಏ.14
ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿರುವುದನ್ನು ಮತದಾರರು ಗಮನಿಸಿದ್ದಾರೆ. ಈ ಚುನಾವಣೆಯಲ್ಲಿಯೂ ಅತ್ಯಂತ ಬಹುಮತಗಳಿಂದ ಆಯ್ಕೆ ಮಾಡಿ ಸಂಸತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ಪ್ರಾಮಾಣಿವಾಗಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಮಾಜಿ ಮುಖ್ಯಮಂತ್ರಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿಜೆಪಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಸೋಮವಾರ ರೋಡ್ ಶೋ ನಡೆಸಿ ಮತಯಾಚಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರದಲ್ಲಿ ರೈತರಿಗಾಗಿ ವಿಶೇಷ ಕೃಷಿ ಬಜೆಟ್ ಮಂಡಿಸಲು ಪ್ರಯತ್ನಿಸಲಾಗುವುದು. ರೈತರು ನಿರಂತರ ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ತಮ್ಮ ಬೆಳೆ ಹಾಗೂ ಮನೆ- ಮಠಗಳನ್ನು ಕಳೆದುಕೊಂಡಾಗ ಪ್ರಕೃತಿ ವಿಕೋಪದ ನಿಧಿ ಮೀಸಲಿಡುವ ಕಾರ್ಯ ಮಾಡುವುದಾಗಿ ಘೋಷಿಸಿದರು.
ಅಭಿವೃದ್ಧಿ ಯೋಜನೆ: ಮುಖ್ಯಮಂತ್ರಿ ಆದಾಗ ಮೊದಲ ಬಾರಿಗೆ ದೇಶದಲ್ಲೇ ರೈತರ ಬೆಳೆಗೆ ರಾಜ್ಯದಲ್ಲಿ ಉಚಿತ ವಿದ್ಯುತ್ ಕೊಡಲಾಯಿತು. ಸಾಲ ಮನ್ನಾ ಮಾಡುವಂತೆ ಅಧಿಕಾರಕ್ಕೆ ಬರುವ ಮೊದಲು ಒತ್ತಾಯ ಮಾಡುತ್ತಿದ್ದ ನಾನು ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡಿ, ನಂತರ ಕೃಷಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆ ಜಾರಿಗೆ ತರಲಾಯಿತು ಎಂದರು.
ರಾಜ್ಯದಲ್ಲಿ ಸೋರಿಕೆ ತಡೆದು 116 ಲಕ್ಷ ಕೋಟಿಗಳ ಬಜೆಟ್ ಮಂಡಿಸಿ ದೇಶದಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಪ್ರಯತ್ನಪಟ್ಟಿದ್ದಾಗಿ ಹೇಳಿದ ಅವರು, ಈ ಮೊದಲು ರಾಜ್ಯವಾಳಿದ ಸರ್ಕಾರವೇಕೆ ಈ ಕಾರ್ಯ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಭೂಮಿ- ಕಟ್ಟಡ ಸೌಲಭ್ಯ: ಸಿಎಂ ಅಧಿಕಾರವಧಿಯಲ್ಲಿ ಯಾವುದೇ ಜಾತಿಭೇದ ಮಾಡದೇ ಎಲ್ಲ ವರ್ಗಕ್ಕೂ ಭೂಮಿ ಸೌಲಭ್ಯ ಕಲ್ಪಿಸಿ, ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವು ಕಲ್ಪಿಸಲಾಗಿದೆ. ಹಾಗೆಯೇ ಎಲ್ಲ ವರ್ಗದ ಏಳಿಗೆಗೆ ಶಕ್ತಿಮೀರಿ ಶ್ರಮಿಸಿ ಯಾವ ವರ್ಗಕ್ಕೂ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಲಾಗಿದೆ. ಮುಸ್ಲಿಂ ಜನಾಂಗಕ್ಕೆ ಶೇ.40 ರಷ್ಟು ಹೆಚ್ಚು ಪ್ರಯೋಜನವಾಗಿದೆ. ರಾಜ್ಯದಲ್ಲಿ ಈವರೆಗೆ ಯಾರು ಸಹಾಯ ಮಾಡದಿದ್ದ ಹಜ್ ಭವನಕ್ಕೆ ಭೂಮಿ ಸೌಲಭ್ಯ ಕಲ್ಪಿಸಿ, 10 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ನೆರವಾಗಿದ್ದೇನೆ. ಈಡಿಗ ಜನಾಂಗಕ್ಕೆ ಇದುವರೆಗೆ ವಿದ್ಯಾರ್ಥಿ ನಿಲಯವಿರಲಿಲ್ಲ. ಶಿವಮೊಗ್ಗ ನಗರದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಭೂಮಿ ನೀಡಿ ಭವನ ನಿರ್ಮಿಸಲಾಗಿದೆ ಎಂದರು.
ರಾಜ್ಯ ಅಲ್ಪಸಂಖ್ಯಾತ ನಿಗಮದ ಮಾಜಿ ಅಧ್ಯಕ್ಷ ಖುರೇಷಿ ಮಾತನಾಡಿ, ಬಿಜೆಪಿ ಕೋಮುವಾದಿ ಪಕ್ಷವಲ್ಲ. ಎಲ್ಲರೂ ಭಾರತೀಯರು ಎಂದು ಭಾವಿಸುವ ಪಕ್ಷ. ಆದರೆ ಕೇಂದ್ರದಲ್ಲಿ ಇರುವ ಕಾಂಗ್ರೆಸ್ ಪಕ್ಷ ಕಳೆದ 10 ವರ್ಷದಲ್ಲಿ ಜಿಲ್ಲೆಯ ಮುಸ್ಲೀಮರಿಗೆ ಏನು ಸಹಾಯ ಮಾಡಿದೆ ತಿಳಿಸಲಿ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅಲ್ಪಸಂಖ್ಯಾರ ಹಿಂದುಳಿದವರ ಸಹಕಾರದಿಂದ ಯಡಿಯೂರಪ್ಪ ಅವರು ಗೆದ್ದೇ ಗೆಲ್ಲುತ್ತಾರೆ. ಆದರೆ, ಕಾರ್ಯಕರ್ತರು ತಮ್ಮ ಕಾರ್ಯದಲ್ಲಿ ಮೈ ಮರೆಯಬಾರದು ಎಂದು ಎಚ್ಚರಿಸಿದರು. ಮಾಜಿ ಶಾಸಕ ಮಹಾಲಿಂಗಪ್ಪ ಮಾತನಾಡಿದರು. ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಬಿಳಕಿ ಈರ್ಯಾನಾಯ್ಕ್,ಬಳ್ಳಿಗಾವಿ ಗ್ರಾಪಂ ಅಧ್ಯಕ್ಷ ಉಜ್ಜಪ್ಪ, ಶಿರಾಳಕೊಪ್ಪದ ರಾಮಚಂದ್ರ, ಅಡಿವೆಪ್ಪ, ತಡಗಣಿ ಗುರುರಾಜ್ ಎಸ್.ಪಿ ಬಿಜೆಪಿಗೆ ಯಡಿಯೂರಪ್ಪ ಬರಮಾಡಿಕೊಂಡರು.
ಮಾಜಿ ಎಂಎಡಿಬಿ ಅಧ್ಯಕ್ಷ ಪದ್ಮನಾಭಭಟ್ಟ, ಮಹಿಳಾ ಮೋರ್ಚಾ ಅಧ್ಯಕ್ಷೆ ನಿವೇದಿತಾ ರಾಜು, ಗಾಯತ್ರಿದೇವಿ, ಗಾಂಧಿ ಸೈಫುಲ್ಲಾ ಹಾಗೂ ಇತರರು ಇದ್ದರು.