'ನೋಟಾ' ಮೂಲಕ ಪಾಠ ಕಲಿಸಿ: ಲೋಕೇಶ್
ಶಿವಮೊಗ್ಗ: ಜನಪ್ರತಿನಿಧಿಗಳು ಜನರನ್ನು ನಿರ್ಲಕ್ಷಿಸಿದ್ದಾರೆ. ರೈತರ ಸಂಕಷ್ಟಗಳು ಪರಿಹಾರವಾಗಿಲ್ಲ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಆಯೋಗವೇ ಅವಕಾಶ ನೀಡಿರುವ ನೋಟಾ (ನನ್ ಆಫ್ ದಿ ಎಬೋ) ಬಟನ್ ಬಳಸಿ ಅವರಿಗೆ ಪಾಠ ಕಲಿಸಿ ಜಿಲ್ಲಾ ಭೂ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ ಈಸೂರು ಹೇಳಿದ್ದಾರೆ.
ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದ ವಚನ ಭ್ರಷ್ಟರು ಕೋಮುವಾದಿ ಮತ್ತು ಜಾತಿವಾದಿಗಳನ್ನು ಲೋಕಸಭಾ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಬೇಕು ಎಂದಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು, ಅಭ್ಯರ್ಥಿಗಳು ಯೋಗ್ಯರಲ್ಲದಿದ್ದರೆ ನೋಟಾ ಗುಂಡಿ ಒತ್ತಲು ಆಯೋಗ ಮತದಾರರನ್ನು ಜಾಗೃತಿ ಮೂಡಿಸಬೇಕು. ಆದರೆ, ಆಯೋಗ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಜನರ ಮುಂದೆ ಹೋಗಲು ಮುಖವಿಲ್ಲದಂತಾಗಿದೆ. ಮಲೆನಾಡಿನ ಕಂದಾಯ ಮತ್ತು ಅರಣ್ಯ ಜಮೀನುಗಳಲ್ಲಿ ಬಗರ್ಹುಕುಂ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಕುಟುಂಬಗಳು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿವೆ. ಜನರಿಗೆ ಮಾರಕವಾಗುವಂತೆ ಕರ್ನಾಟಕ ಭೂಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿದೆ ಎಂದಿದ್ದಾರೆ.
ಚುನಾವಣೆ ನಂತರ ಬಗರ್ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯು ಪೊಲೀಸ್ ಇಲಾಖೆಯೊಂದಿಗೆ ತಯಾರಿ ಮಾಡಿಕೊಂಡಿವೆ. ಎಲ್ಲಾ ರಾಜಕೀಯ ಪಕ್ಷಗಳು ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುತ್ತೇವೆ ಎಂದು ಹೇಳುವ ಧೈರ್ಯವಿಲ್ಲ. ಮತ ಕೇಳಲು ನೈತಿಕತೆ ಉಳಿಸಿಕೊಂಡಿಲ್ಲ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಗಣೇಶ್ ಬೆಳ್ಳಿ, ಸದಾಶಿವಪ್ಪ, ಶಂಕರಪ್ಪ, ಮಂಜನಾಯ್ಕ, ಅಣ್ಣಪ್ಪ, ಗಿರೀಶ್ ಇತರರು ಇದ್ದರು.