ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವೃದ್ಧಾಶ್ರಮ ಬೇಕಿರೋದು ಬಿಜೆಪಿಗೆ

Lingaraj Badiger
Updated On : 15 Apr 2014, 10:31 am

ಶಿವಮೊಗ್ಗ: ಕನ್ನಡಿಗರ ಕೆಚ್ಚೆದೆ ಪ್ರಶ್ನಿಸಿರುವ ನರೇಂದ್ರ ಮೋದಿ ಅವರಿಗೆ ಕನ್ನಡಿಗರು ಪಾಠ ಕಲಿಸುತ್ತಾರೆ ಎಂದು ಜೆಡಿಎಸ್ ಶಾಸಕ ವೈಎಸ್‌ವಿ ದತ್ತ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿ ನಮಗೇನೂ ಆಶ್ರಯ ನೀಡಬೇಕಾದ ಅಗತ್ಯ ಇಲ್ಲ. ಬದಲಾಗಿ ವೃದ್ಧಾಶ್ರಮದ ಅವಶ್ಯಕತೆ ಇರುವುದು ಬಿಜೆಪಿಯವರಿಗೇ ಎಂದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ದೇವೇಗೌಡರು ಕನ್ನಡದ ಸ್ವಾಭಿಮಾನದ ಪ್ರತೀಕವಾಗಿದ್ದಾರೆ. ಅವರ ಬಗ್ಗೆ ಮೋದಿ ಅವರು ಮಾಡಿರುವ ಕೀಳು ಅಭಿರುಚಿಯ ಆರೋಪವು ಅವರಿಗೇ ತಿರುಗುಬಾಣವಾಗಲಿದೆ. ಅವರು ತಮ್ಮ ಗೋರಿಯನ್ನು ತಾವೇ ತೋಡಿಕೊಂಡಿದ್ದಾರೆ ಎಂದರು.
ಬಿಜೆಪಿ ವಿರುದ್ಧ ಅಲೆ: ದೇವೇಗೌಡರಿಗೆ ಗುಜರಾತ್‌ನಲ್ಲಿ ಆಶ್ರಯ ನೀಡುವುದಾಗಿ ಹೇಳಿ ಮೋದಿ ಅವರು ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆ. ಕನ್ನಡಿಗರಿಗೆ ಮೋದಿ ಹಂಗು ಅಗತ್ಯವಿಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕಾಗಿದೆ ಎಂದ ಅವರು, ಮೋದಿ ಅವರು ಮಾಡಿದ ಟೀಕೆ ರಾಜ್ಯದಲ್ಲಿ ಬೇರೆ ರೀತಿ ಕೆಲಸ ಮಾಡುತ್ತಿದೆ. ಬಿಜೆಪಿ ವಿರುದ್ಧ ಅಲೆ ಏಳುತ್ತಿದೆ ಎಂದರು.
ನಿಜವಾಗಿಯೂ ವೃದ್ಧಾಶ್ರಮದ ಅವಶ್ಯಕತೆ ಇರುವುದು ಬಿಜೆಪಿಗೆ. ಪಕ್ಷವನ್ನು ಕಟ್ಟಿ ಬೆಳೆಸಿದ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರನ್ನು ಮೋದಿ ಮೂಲೆಗುಂಪು ಮಾಡಿದ್ದಾರೆ. ವೃದ್ಧಾಶ್ರಮಕ್ಕೆ ಕಳಿಸಿದ್ದಾರೆ ಎಂದರು.
10 ತಿಂಗಳು ದೇವೇಗೌಡರು ಪ್ರಧಾನಿಯಾಗಿ ಮಾಡಿದ ಕೆಲಸವನ್ನು ಬೇರೆ ಯಾವ ಪ್ರಧಾನಿಯೂ ಮಾಡಲಿಲ್ಲ. ಕೇಂದ್ರ ಸರ್ಕಾರದ ಆಯವ್ಯಯವನ್ನು ಕೃಷಿಯತ್ತ ತಿರುಗಿಸಿದವರು ಅವರು. ರಾಜ್ಯ ಸರ್ಕಾರಗಳ ನೀರಾವರಿ ಯೋಜನೆಗೆ ನೆರವು ನೀಡುವುದಕ್ಕೆ ಕೇಂದ್ರ ಸರ್ಕಾರವು ಗಾಡ್ಗಿಳ್ ವರದಿ ಮುಂದಿಟ್ಟು ಅಡ್ಡಿಪಡಿಸುತ್ತಿತ್ತು. ಅದನ್ನು ದೇವೇಗೌಡರು ನಿವಾರಿಸಿದರು. ಅವರು ಕನ್ನಡಿಗರ ಸ್ವಾಭಿಮಾನದಂತೆ ಪ್ರಧಾನಿಯಾಗಿದ್ದರು ಎಂದರು.
ಹತಾಶರಾದ ಬಿಎಸ್‌ವೈ: ಯಡಿಯೂರಪ್ಪ ಅವರು ಗೆದ್ದೇಬಿಟ್ಟೆ ಎಂಬ ಭ್ರಮೆಯಲ್ಲಿದ್ದಾರೆ. ನಾವು ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅವರು ಭ್ರಮನಿರಸನ ಹೊಂದುವುದು ಖಂಡಿತಾ ಎಂದು ವೈಎಸ್‌ವಿ ದತ್ತ ಹೇಳಿದರು.
ಅವರು ವ್ಯಕ್ತಿ ಆಧಾರಿತ ಚುನಾವಣೆ ನಡೆಸುತ್ತಿದ್ದಾರೆ. ನಾವು ಅದಕ್ಕೆ ತಕ್ಕಂತೆ ದಾಳ ಉರುಳಿಸಿದ್ದೇವೆ. ಗೀತಾ ಅವರು ಗೆದ್ದು ಸಾಂಸ್ಕೃತಿಕ ರಾಯಭಾರಿಯಾಗಲಿದ್ದಾರೆ ಎಂದರು.
ಯಡಿಯೂರಪ್ಪ ಅವರ ಹಣದ ಪ್ರಭಾವವನ್ನು ನಾನೂ ಅನುಭವಿಸಿದ್ದೇನೆ. 2010ರ ಕಡೂರು ಉಪಚುನಾವಣೆಯಲ್ಲಿ ಅವರ ತಂತ್ರಮಂತ್ರ ನಡೆಸಿದ್ದರು. ದತ್ತನನ್ನು ಸೋಲಿಸಲು ಚುನಾವಣೆ ನಂತರ ಕಡೂರು ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿ ಮಾತಿಗೆ ತಪ್ಪಿದ್ದರು. ಈಗ ಅವರಿಗೆ ಕಡೂರಿಗೆ ಬರುವುದಕ್ಕೆ ಮುಖವಿಲ್ಲ ಎಂದು ಟೀಕಿಸಿದರು.
ಈ ಚುನಾವಣೆಯಲ್ಲಿ ಸುಮ್ಮನೆ ಹಣ ಕಳೆದುಕೊಳ್ಳಬೇಡಿ. ಚುನಾವಣೆಗೆ ಹಣ ವಿನಿಯೋಗಿಸುವ ಮುನ್ನ ಸ್ವಲ್ಪ ಯೋಚಿಸಿ. ಏಕೆಂದರೆ ನೀವು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಹಣ ಖರ್ಚು ಮಾಡಬೇಕು. ಇಲ್ಲಿ ಏಕೆ ಸುಮ್ಮನೆ ಹಣ ಚೆಲ್ಲುತ್ತೀರಿ ಎಂದು ಲೇವಡಿ ಮಾಡಿದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ವಿಧಾನಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ಕಡಿದಾಳು ಗೋಪಾಲ್ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement