ಸಂಶಯವೇ ಬೇಡ ರಾಜ್ಯದಲ್ಲಿ 20 ಸ್ಥಾನ ಬಿಜೆಪಿಗೆ
ಕ.ಪ್ರ. ವಾರ್ತೆ, ಶಿಕಾರಿಪುರ, ಏ.14
ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಜೊತೆಗೆ ರಾಜ್ಯದಲ್ಲಿ ಬಿಜೆಪಿ 20 ಸ್ಥಾನ ಗಳಿಸುವುದೂ ಸತ್ಯ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಶಿಕಾರಿಪುರದಲ್ಲಿ ರೋಡ್ ಶೋ ನಡೆಸಿದ ನಂತರ ನರಸಪ್ಪ ಬಯಲು ರಂಗಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿಯವರು ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಮಲವನ್ನು (ಬಿಜೆಪಿ ಸಂಸದರನ್ನು) ಲೋಕಸಭೆಗೆ ಆಯ್ಕೆಗೊಳಿಸಿ ಕಳುಹಿಸಿದಲ್ಲಿ ಲಕ್ಷ್ಮಿಯನ್ನು (ಅನುದಾನವನ್ನು) ನಿಮ್ಮ ಕ್ಷೇತ್ರಕ್ಕೆ ಕಳುಹಿಸುವುದಾಗಿ ತಿಳಿಸಿದ್ದು, ಈ ದಿಸೆಯಲ್ಲಿ ಪಕ್ಷದ ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಿ ಮೋದಿ ಪ್ರಧಾನಿಯಾದಲ್ಲಿ ಪ್ರತಿ ಕ್ಷೇತ್ರಕ್ಕೂ ಹೆಚ್ಚಿನ ಅನುದಾನದ ಮೂಲಕ ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಸಂಶಯ ಬೇಡ ಎಂದರು.
25 ಕ್ಷೇತ್ರದಲ್ಲಿ ಪ್ರಚಾರ: ಅಹೋರಾತ್ರಿ ಪಕ್ಷದ ಪರವಾಗಿ ಮತಯಾಚಿಸಿದ ಕಾರ್ಯಕರ್ತರು, ಮುಖಂಡರನ್ನು ಅಭಿನಂದಿಸಿದ ಅವರು ಈಗಾಗಲೇ ರಾಜ್ಯದ 25 ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದು, 20 ಸ್ಥಾನದಲ್ಲಿ ಪಕ್ಷದ ಜಯನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮತದಾರರನ್ನು ಕಾರ್ಯಕರ್ತರು, ಮುಖಂಡರು ಮತಗಟ್ಟೆಗೆ ಕರೆತಂದು ಮತವನ್ನು ಪಕ್ಷಕ್ಕೆ ದೊರಕಿಸುವ ಜವಾಬ್ದಾರಿಯನ್ನು ವಹಿಸಿಕೊಂಡಾಗ ಇದುವರೆಗಿನ ರಾತ್ರಿ ಹಗಲಿನ ಪ್ರಚಾರ ಕಾರ್ಯ ಸಾರ್ಥಕವಾಗಲಿದೆ ಎಂದು ಹೇಳಿದರು.
ದಾಖಲೆಯ ಮತದಾನ: ರಾಜ್ಯದ ವಿವಿಧೆಡೆ ಪ್ರಚಾರಕ್ಕಾಗಿ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವಕ್ಷೇತ್ರಕ್ಕೆ ಭೇಟಿ ನೀಡುವುದು ಅಸಾಧ್ಯವಾಗಿದ್ದು, ದೊರೆತ ಅವಕಾಶದಲ್ಲಿ ತಾಲೂಕಿನ ಜನತೆಯ ಋಣ ತೀರಿಸುವ ಪ್ರಯತ್ನವನ್ನು ಮಾಡಿದ್ದಾಗಿ ತಿಳಿಸಿದರಲ್ಲದೇ, ದೇಶ ಹಾಗೂ ರಾಜ್ಯದ ಜನತೆ ಶಿವಮೊಗ್ಗ ಕ್ಷೇತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದು, ಜಿಲ್ಲೆಯ 8 ವಿಧಾನಸಬಾ ಕ್ಷೇತ್ರಕ್ಕಿಂತ ಶಿಕಾರಿಪುರದಲ್ಲಿ ದಾಖಲೆಯ ಮತವನ್ನು ಪಕ್ಷ ಪಡೆಯಬೇಕಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಳೆದ ಬಾರಿಯ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ದೊರೆತ ಮತಗಳ ಅಂತರಕ್ಕಿಂತ ಅಧಿಕ ಮತಗಳನ್ನು ಪಕ್ಷ ಪಡೆಯಬೇಕಾಗಿದೆ. ಈ ದಿಸೆಯಲ್ಲಿ ಮುಖಂಡರು, ಕಾರ್ಯಕರ್ತರು ವಿಶ್ವಾಸಗಳಿಸುವಂತೆ ತಿಳಿಸಿದರು. ಬಗರ್ಹುಕುಂ ಸಾಗುವಳಿದಾರ ಪರ ಹೋರಾಟ, ಅಭಿವೃದ್ಧಿ ಹರಿಕಾರರಾಗಿ ಯಡಿಯೂರಪ್ಪನವರು ಜನಪ್ರಿಯರಾಗಿದ್ದು ಅತೀ ಹೆಚ್ಚು ಮತ ದೊರಕಿಸುವ ಮೂಲಕ ಅವರ ಹೋರಾಟದ ಹಾದಿಯನ್ನು ಸ್ಮರಿಸಬೇಕಾಗಿದೆ ಎಂದರು.
ಆನಂದಪುರದಲ್ಲಿ ಮತಯಾಚನೆ
ಆನಂದಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರಿಗೆ ಮತ ನೀಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕೆಂಬ ಘೋಷಣೆಯೊಂದಿಗೆ ಸಾಗರ ತಾಲೂಕಿನ ಅನಂದಪುರದಲ್ಲಿ ಬಿಜೆಪಿ ರೋಡ್ ಶೋ ನಡೆಸಿತು.
ಆನಂದಪುರಂ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಉಮೇಶ ಗೌಡ ಕರಡಿಮನೆ ಮತ್ತು ಕಾರ್ಯದರ್ಶಿ ಎ.ಎಸ್. ಅಚ್ಯುತನ್ ನೇತೃತ್ವದಲ್ಲಿ ಆಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು, ಯಡೇಹಳ್ಳಿಯ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಿಂದ ದಾಸಕೊಪ್ಪದ ವೃತ್ತದ ಬೈಕ್ ರ್ಯಾಲಿ ನಡೆಸಿ ಗ್ರಾಮಸ್ಥರ ಗಮನ ಸೆಳೆದು ಮತ ಯಾಚಿಸಿದರು.