'ಸರ್ವರಿಗೂ ಸಂವಿಧಾನ ಹಕ್ಕು ಕಲ್ಪಿಸಿದ ಅಂಬೇಡ್ಕರ್'
ಶಿಕಾರಿಪುರ: ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಎಲ್ಲಾ ವರ್ಗದ ಜನತೆಗೆ ಸೂಕ್ತ ಹಕ್ಕು, ಸ್ಥಾನಮಾನವನ್ನು ಸಂವಿಧಾನದ ಮೂಲಕ ಕಾನೂನುಬದ್ಧವಾಗಿ ದೊರಕಿಸಿಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಚಿರಸ್ಥಾಯಿಯಾಗಿ ಸದಾಕಾಲ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಶಿಕಾರಿಪುರದ ಸಹಾಯಕ ಚುನಾವಣಾಧಿಕಾರಿ ಗೋಪಾಲ್ ತಿಳಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ,ಪುರಸಭೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ಅವರ 123ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನಶಿಲ್ಪಿ: ಸ್ವಾತಂತ್ರಾ ನಂತರದಲ್ಲಿ ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಾದ ಸಂವಿಧಾನ ರಚನೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿವಿಧ ದೇಶದ ಸಂವಿಧಾನವನ್ನು ಕೂಲಂಕಷವಾಗಿ ಅಭ್ಯಸಿಸಿ ಎಲ್ಲಾ ವರ್ಗದ ಜನತೆಗೆ ಸೂಕ್ತವಾದ ಹಕ್ಕು, ಸ್ಥಾನಮಾನವನ್ನು ಕಾನೂನು ಬದ್ಧವಾಗಿ ದೊರಕಿಸಿಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಸಂವಿಧಾನಶಿಲ್ಪಿ ಎನಿಸಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಜಗದೀಶ್ ಮಾತನಾಡಿ, ತಮ್ಮ ಉನ್ನತ ಆದರ್ಶ, ಚಿಂತನೆ ಮೂಲಕ ಡಾ.ಅಂಬೇಡ್ಕರ್ ಅವರು ಭಾರತಕ್ಕೆ ಮಾತ್ರ ರತ್ನವಲ್ಲದೆ ವಿಶ್ವವೇ ಅವರನ್ನು ಕೊಂಡಾಡುವ ಬಹು ದೊಡ್ಡ ರತ್ನವಾಗಿದ್ದಾರೆ ಎಂದರು.
ಹೊಸೂರು ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕ ಸುಧಾಕರ್ ಹಿರೇಕಸವಿ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ತಾ.ಪಂ. ಇಒ ಡಾ.ಚಂದ್ರಶೇಖರ್, ಪುರಸಭಾ ಮುಖ್ಯಾಧಿಕಾರಿ ಮನೋಹರ್, ಬಿಇಒ ಸಿದ್ದಲಿಂಗಪ್ಪ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದೇನ್ಯಾನಾಯ್ಕ, ಉಪನ್ಯಾಸಕ ಸೋಮಶೇಖರ್ ಶಿವಮೊಗ್ಗಿ, ಸಿಡಿಪಿಒ ಲಿಂಗಾನಾಯ್ಕ್, ಪ್ರಾಚಾರ್ಯ ಎಂ.ನಾಗರಾಜಪ್ಪ, ಲೋಕೋಪಯೋಗಿ ಇಲಾಖೆ ಎಇಇ ರಮೇಶ್ ಮತ್ತಿತರರು ಹಾಜರಿದ್ದರು.