83.4 ಲಕ್ಷ ವಶ: ಶಾಸಕರ ಪುತ್ರ ಸೇರಿ 4 ಬಂಧನ
ಶಿವಮೊಗ್ಗ: ಮತದಾನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವ ಮುನ್ನ ಶಿವಮೊಗ್ಗದಿಂದ ದಾವಣಗೆರೆಯತ್ತ ಇನ್ನೋವಾ ವಾಹನದಲ್ಲಿ ಹೊರಟಿದ್ದ ಸುಮಾರು 83.4 ಲಕ್ಷ ರುಪಾಯಿ ಅಕ್ರಮ ಹಣ ಹಾಗೂ ಮದ್ಯವನ್ನು ಪೊಲೀಸರು ಸಿನೀಮಿಯ ರೀತಿಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಅಕ್ರಮವಾಗಿ ಹಣ ಮದ್ಯ ಸಾಗಿಸುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.
ಶಿವಮೊಗ್ಗದಿಂದ ಹೊನ್ನಾಳಿ ರಸ್ತೆಯಲ್ಲಿ ಅಕ್ರಮವಾಗಿ ಹಣ ಸಾಗಣೆಯಾಗಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಎಆರ್ ಓ ಜನಾರ್ದನ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಭೀಮಾ ಶಂಕರ್, ಐಎಎಸ್ ಪ್ರೊಬೆಷನರಿ ಅಧಿಕಾರಿ ರಾಕೇಶ್ ಶರ್ಮ ತಂಡ ಪೊಲೀಸರೊಂದಿಗೆ ರಾತ್ರಿ 7.30ರ ಸುಮಾರಿಗೆ ಹದ್ದಿನಕಣ್ಣಿಟ್ಟು ಕಾಯಲಾರಂಭಿಸಿತು.
ಸೂಗೂರು ಬಳಿ ಅನುಮಾನಾಸ್ಪದವಾಗಿ ಬಂದ ಇನ್ನೋವಾ ವಾಹನ(ಕೆಎ17 ಬಿ 792)ವನ್ನು ನಿಲ್ಲಿಸಲು ಅಧಿಕಾರಿಗಳ ತಂಡ ಪ್ರಯತ್ನಿಸಿತಾದರೂ ಅದು ನುಗ್ಗಿ ಮುಂದೆ ಹೋಯಿತು. ತಕ್ಷಣವೇ ಪೊಲೀಸರು ಅಧಿಕಾರಿಗಳಿದ್ದ ತಂಡ ಇನ್ನೋವಾ ವಾಹನವನ್ನು ಚೇಸ್ ಮಾಡಿ ನಾಲ್ಕು ಕಿಲೋಮೀಟರ್ ಅಂತರದಲ್ಲಿ ನಿಲ್ಲಿಸಲು ಯಶಸ್ವಿಯಾದರು.
ನೋಟಿನ ಕಂತೆ ಕಂತೆ: ಕಾರನ್ನು ಪರಿಶೀಲನೆಗೊಳಪಡಿಸಿದಾಗ ಮೇಲ್ನೋಟಕ್ಕೆ ಏನು ಕಾಣದಾಯಿತು. ಆದರೆ, ಕಾರಿನಲ್ಲಿದ್ದವರ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ ಇನ್ನಷ್ಟು ಸೂಕ್ಷ್ಮ ತಪಾಸಣೆಗೆ ಅಧಿಕಾರಿಗಳ ತಂಡ ಮುಂದಾಯಿತು. ಕಾರಿನ ಬಾಗಿಲೊಳಗೆ ಅಡಗಿಸಿಟ್ಟಿದ್ದ 500 ರುಪಾಯಿ ಹಾಗೂ 100 ರುಪಾಯಿ ಬಂಡಲ್‌ಗಳು ಈ ಸಂದರ್ಭದಲ್ಲಿ ಕಂಡುಬಂತು. ಕೆಲವು ಮದ್ಯದ ಬಾಟಲುಗಳು ಸಹ ಪತ್ತೆಯಾದವು. ತಕ್ಷಣವೇ ಕಾರಿನಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು ಮತ್ತು ಹಣವನ್ನು ವಶಕ್ಕೆ ಪಡೆಯಲಾಯಿತು.
ಬಂಧನ: ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದೂರಿನ ಮೇರೆಗೆ ತನಿಖೆ ನಡೆದಿದೆ. ಕಾರಿನಲ್ಲಿದ್ದವರು ದಾವಣಗೆರೆ ಜಿಲ್ಲೆಯ ಶಾಸಕರೊಬ್ಬರ ಪುತ್ರ ಪ್ರದೀಪ್ ಎಂದೂ ಸಹ ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿ ಕಲೆ ಹಾಕಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್, ಇಷ್ಟೊಂದು ಹಣ ಚುನಾವಣೆಗೆ ಬಳಕೆಯಾಗುತ್ತಿತ್ತೇ, ಅಥವಾ ಈ ಹಣ ಯಾರದ್ದು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಾಗಿದೆ ಎಂದರು.
ಶಾಸಕರ ಪುತ್ರ: ಸದ್ಯದ ಮಾಹಿತಿ ಪ್ರಕಾರ ನರಸಿಂಹ, ಪ್ರದೀಪ, ಅಜ್ಜಪ್ಪ, ಮಂಜುನಾಥ್ ಬಂಧಿತರು. ಈ ಪೈಕಿ ಪ್ರದೀಪ್ ಎಂಬುವರು ದಾವಣಗೆರೆ ಜಿಲ್ಲೆಯ ಶಾಸಕರೊಬ್ಬರ ಪುತ್ರರು ಎನ್ನಲಾಗಿದೆ. ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಕೇಶ್ ಶರ್ಮ, ಸಬ್ ಇನ್ಸ್‌ಪೆಕ್ಟರ್ ಮತ್ತು ತಂಡ ದಾಳಿಯನ್ನು ಪಾಲ್ಗೊಂಡಿತ್ತು ಎಂದು ಅವರು ಮಾಹಿತಿ ನೀಡಿದರು.
ಎಸ್ಪಿ ಕೌಶಲೇಂದ್ರ ಕುಮಾರ್ ಮಾಹಿತಿ ನೀಡಿ, ಸರ್ಕಲ್ ಇನ್ಸ್‌ಪೆಕ್ಟರ್ ಅವರು ಪ್ರಕರಣದ ತನಿಖೆ ನಡೆಸಿ ವರದಿ ನೀಡಲಿದ್ದಾರೆ. ನಂತರ ಇದು ಯಾವ ಪಕ್ಷಕ್ಕೆ ಸೇರಿದ್ದು ಎಂದು ತಿಳಿಯುತ್ತದೆ ಎಂದು ವಿವರಿಸಿದರು.
ತನಿಖೆ ತೀವ್ರ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗದ ಕಾಂಗ್ರೆಸ್ ಮುಖಂಡರು, ನಗರಪಾಲಿಕೆಯ ಕಾಂಗ್ರೆಸ್ ಸದಸ್ಯರು ಕೆಲವರು ಠಾಣೆಗೆ ದೌಡಾಯಿಸಿದ್ದರು.
ಈ ಮಧ್ಯೆ ವಶಕ್ಕೆ ಪಡೆದ ಹಣ ಶಿವಮೊಗ್ಗ ಕ್ಷೇತ್ರಕ್ಕೆ ಬಳಕೆಯಾಗುವುದಿತ್ತೆ ಅಥವಾ ನೆರೆಯ ದಾವಣಗೆರೆ ಜಿಲ್ಲೆಗೆ ಹೊರಟಿದ್ದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ ಇದು ಮೂರನೇ ಪ್ರಕರಣ. ಮೊದಲು 5 ಲಕ್ಷ ರುಪಾಯಿ ಸಿಕ್ಕಿದ ಒಂದು ಪ್ರಕರಣ ಹಾಗೂ 2.5 ಲಕ್ಷ ರುಪಾಯಿಯ ಒಂದು ಪ್ರಕರಣ ಪತ್ತೆಯಾಗಿತ್ತು.