ಹಣವಂತರ ಎದುರು ಸಜ್ಜನರ ಸ್ಪರ್ಧೆ: ಯಾದವ್
ಸಾಗರ: ಹಣವಂತರು, ಶಕ್ತಿವಂತರ ಎದುರು ಶ್ರೀಧರ ಕಲ್ಲಹಳ್ಳಿಯಂತಹ ಸಚ್ಚಾರಿತ್ರ್ಯರು ಹಾಗೂ ಸಜ್ಜನರನ್ನು ಕಣಕ್ಕೆ ಇಳಿಸಿರುವುದು ಆಮ್ ಆದ್ಮಿ ಪಕ್ಷದ ವಿಶೇಷತೆಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕ ಯೋಗೇಂದ್ರ ಯಾಧವ್ ಹೇಳಿದರು.
ಇಲ್ಲಿನ ಸಾಗರ ಹೋಟೆಲ್ ವೃತ್ತದಲ್ಲಿ ಮಂಗಳವಾರ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಿದ ಅವರು, ದೊಡ್ಡ ವ್ಯಕ್ತಿಗಳ ವಿರುದ್ಧ ಜನಸಾಮಾನ್ಯರನ್ನು ನಿಲ್ಲಿಸುವುದು ಪಕ್ಷದ ಪ್ರಮುಖ ಆಶಯವಾಗಿದೆ ಎಂದರು.
2014ರ ಲೋಕಸಭಾ ಚುನಾವಣೆ ಧರ್ಮ ಮತ್ತು ಅಧರ್ಮಗಳ ನಡುವೆ ನಡೆಯುತ್ತಿರುವ ಯುದ್ಧವಾಗಿದೆ. ಆಮ್ ಆದ್ಮಿ ಹುಟ್ಟಿಕೊಂಡ ಸ್ವಲ್ಪ ತಿಂಗಳಿನಲ್ಲಿ ದೆಹಲಿಯ ಅಧಿಕಾರ ಹಿಡಿಯುವಂತೆ ಆಯಿತು. ಆದರೆ ರಾಜಿ ತಂತ್ರಗಾರಿಕೆ ನಡೆಸಲು ಸಿದ್ದವಿಲ್ಲದ ಕಾರಣದಿಂದ ಅಧಿಕಾರವನ್ನು ಬಿಟ್ಟುಕೊಡುವ ಸ್ಥಿತಿಯೂ ನಿರ್ಮಾಣವಾಯಿತು. ಲೋಕಸಭಾ ಚುನಾವಣೆಯಲ್ಲಿ ಸಹ ಆಮ್ ಆದ್ಮಿ ಉತ್ತಮ ಸಾಧನೆ ಮಾಡಲಿದೆ ಎಂದರು.