ಅಮ್ಮನನ್ನು ಕರೆತಂದಿದ್ದು ಕ್ರೌರ್ಯ
ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರದ ಕೊನೆ ಹಂತದ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪನವರು ಒಂದು ಸುತ್ತಿನ ಕರಪತ್ರ ಸಮರ ಸಾರಿದ್ದಾರೆ. ತಮ್ಮ ಸಹೋದರಿ ವಿರುದ್ಧ ಹರಿತ ಶಬ್ದಗಳಲ್ಲಿ ಟೀಕಿಸಿ ಮನೆ ಮನೆಗೆ ಕರಪತ್ರ ಮುಟ್ಟಿಸಲು ಸಫಲರಾಗಿದ್ದಾರೆ.
ತಮ್ಮ ಭಾವನೆಗಳನ್ನು ಕರಪತ್ರದಲ್ಲಿ ಹೇಳಿಕೊಂಡಿರುವ ಅವರು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೋರುವುದನ್ನು ಮರೆತಿಲ್ಲ.
ಏನೆಲ್ಲಾ ಟೀಕೆ: ಡಾ. ರಾಜ್ ಕುಮಾರ್ ಅವರ ನಿಲುವಿಗೆ ವಿರುದ್ಧವಾಗಿ ಅವರ ಕುಟುಂಬದವರನ್ನು ರಾಜಕೀಯಕ್ಕೆ ಕರೆತರಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ಅಸ್ತಿತ್ವದ ಕೊರತೆ: ತಮ್ಮ ಅಸ್ತಿತ್ವದ ಕೊರತೆಯನ್ನು ನಿವಾರಿಸಿಕೊಳ್ಳಲು ಕಂಡಕಂಡ ನಟ ನಟಿಯರನ್ನು ಬೀದಿಗಿಳಿಸಿ ಜಾತ್ರೆ ನಡೆಸುತ್ತಿದ್ದಾರೆ. ಆದರೂ ರಾಜ್ ಕುಟುಂಬದ ಇತರೆ ಸದಸ್ಯರು ಇವರ ಜೊತೆಗೂಡದೇ ಇರುವುದು ಆ ಮಹಾಚೇತನದ ಆತ್ಮಕ್ಕೆ ಸಲ್ಲಿಸಿದ ಗೌರವ ಎನ್ನಬೇಕೆಂದು ಪ್ರತಿಪಾದಿಸಿದ್ದಾರೆ. ಬಂಗಾರಪ್ಪನವರನ್ನು ಸಾಲಗಾರನನ್ನಾಗಿಸಿ ಸೋಲಿನ ಸರಮಾಲೆಯನ್ನು ಅವರ ಕೊರಳಿಗೆ ಕಟ್ಟಿದ ಮತ್ತು ಸೊರಗಿಸಿ ಸಾವಿನ ಸನಿಹಕ್ಕೆ ತಂದಿದ್ದು ಮಧು ಎಂದು ಟೀಕಿಸಿದ್ದಾರೆ.
ತಂದೆಗೆ ನೆರವಾಗಲಿಲ್ಲ: ತಂದೆಯವರು ಪ್ರಜ್ಞಾಹೀನರಾಗಿ ಆಸ್ಪತ್ರೆ ಸೇರಿದಾಗ ವಿದೇಶದಲ್ಲಿದ್ದ ಇವರು ಬಂದ ಮೇಲೆ ಬಂಧು ಬಳಗದವರಿಗಾಗಲೀ ಅವರ ಅಭಿಮಾನಿಗಳಿಗಾಗಲಿ ನೋಡುವ ಅವಕಾಶ ನೀಡಲಿಲ್ಲ. ನಲವತ್ತು ವರ್ಷಗಳಿಗೂ ಮೀರಿ ಸಹ ಜೀವನ ನಡೆಸಿದ ಬಂಧುವೊಬ್ಬರ ಕುತ್ತಿಗೆ ಹಿಡಿದು ಆಸ್ಪತ್ರೆಯಿಂದ ಹೊರದಬ್ಬಿದ. ಹಿಂದಿನ ಯಾವ ಚುನಾವಣೆಗಳಲ್ಲೂ ಆರ್ಥಿಕವಾಗಿ ಕುಗ್ಗಿದ ತಂದೆಯ ನೆರವಿಗೆ ಬಾರದಿದ್ದ ಹೆಣ್ಣು ಮಕ್ಕಳು ಮಾವನ ಪರವಾಗಿ ಪ್ರಚಾರ ಕೈಗೊಳ್ಳದಿದ್ದ ಅಳಿಯಂದಿರು ಈಗ ಏಕಾಏಕಿ ಶಿವಮೊಗ್ಗಕ್ಕೆ ಸೀಮಿತವಾಗಿ ಬಂದರು, ಪ್ರಚಾರ ನಡೆಸಿದರು.
ಜೆಡಿಎಸ್ ಮಣ್ಣುಗೂಡಿಸಿ: ಜಿಲ್ಲೆಯ ದೀವರು ಎಚ್ಚೆತ್ತುಕೊಂಡು ತಮ್ಮ ಮೇಲೆ ಸವಾರಿಗೆ ಹೊರಟಿರುವ ಜೆಡಿಎಸ್ನವರ ಭವಿಷ್ಯ ಮಣ್ಣುಗೂಡಿಸಬೇಕೆಂದು ಕುಮಾರ್ ಬಂಗಾರಪ್ಪ ಮನವಿ ಮಾಡಿದ್ದಾರೆ. ಜಿಲ್ಲೆಯ ವಯೋವೃದ್ಧ ನಾಯಕರೊಬ್ಬರ ಕುಮ್ಮಕ್ಕಿನಿಂದ ಮಧುವಿನ ಅಹಂಕಾರಕ್ಕೆ ಕೊಂಬು ಮೂಡಿದೆ. ಸಮಾಜದ ಋಣ ಮತ್ತು ಕಾಂಗ್ರೆಸ್ ಋಣ ತೀರಿಸಬೇಕಾದ ಅವರು ಅಗಲಿರುವ ನಾಯಕರೊಬ್ಬರ ಹೆಸರಿನಲ್ಲಿ ಜೆಡಿಎಸ್ ಜೊತೆ ಕೈಜೋಡಿಸಿ ಕಾಂಗ್ರೆಸ್ ಅಭ್ಯರ್ಥಿಗೆ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಾಗರದ ಹಿರಿಯ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಆಹ್ವಾನಕ್ಕೆ ಟೀಕೆ: ಡಾ.ರಾಜ್ಕುಮಾರ್ ಅವರ ಸಾಂಸ್ಕೃತಿಕ ಶಾಪಕ್ಕೆ ಗುರಿಯಾಗಿರುವ ಗೀತಾ ರಾಜಕೀಯ ಬಿಟ್ಟು ಬಂದರೆ ಕುಟುಂಬದಲ್ಲಿ ಸೇರಿಸಿಕೊಳ್ಳಬಹುದು ಎಂಬ ಷರತ್ತು ಬದ್ದ ಆಹ್ವಾನ ನೀಡಿರುತ್ತಾಳೆ. ಕೇವಲ 15 ದಿನಗಳ ಹಿಂದೆಯಷ್ಟೇ ಒಂದು ಪ್ರಾದೇಶಿಕ ಪಕ್ಷಕ್ಕೆ ಸೇರ್ಪಡೆಗೊಂಡ ಅನನುಭವಿಯಿಂದ ರಾಜಕೀಯದಲ್ಲಿ ಉತ್ತುಂಗಕ್ಕೇರಿದ ಸೊಕ್ಕು. ಅಂತಿಮವಾಗಿ ತಮ್ಮ ತಾಯಿಯನ್ನು ಜೆಡಿಎಸ್ ಪ್ರಚಾರಕ್ಕೆ ಬಳಸಿದ್ದಕ್ಕೆ ಆಕ್ಷೇಪಿಸಿದ್ದಾರೆ. ನಿಲ್ಲಲೂ ತ್ರಾಣವಿಲ್ಲದ ನನ್ನ ಅಮ್ಮನನ್ನು ಕರೆತಂದು ಮೆರವಣಿಗೆ ಮಾಡಿಸಿದ್ದು ಜೆಡಿಎಸ್ನವರ ಕ್ಲೈಮ್ಯಾಕ್ಸ್. ಇಂತಹ ಕ್ರೌರ್ಯಕ್ಕೆ ಕೈಹಾಕಿದರೆ ಜನ ಛೀಮಾರಿ ಹಾಕಿಯಾರು ಎಂದು ಎಚ್ಚರಿಸಿದ್ದಾರೆ.