ಚುನಾವಣಾ ವೆಚ್ಚ ತೋರಿಸಲು ವಿಫಲ: ನೋಟಿಸ್
ಕ.ಪ್ರ.ವಾರ್ತೆ ಶಿವಮೊಗ್ಗ ಏ. 16
ಚುನಾವಣಾ ವೆಚ್ಚ ಪುಸ್ತಕ ತಪಾಸಣೆಗೆ ಹಾಜರಾಗದ ಇಬ್ಬರು ಅಭ್ಯರ್ಥಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ನೋಟಿಸ್ ಜಾರಿ ಮಾಡಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಚ್. ಸುರೇಶ್ ಪೂಜಾರಿ ಅವರಿಗೆ ಚುನಾವಣಾ ವೆಚ್ಚ ಪುಸ್ತಕ ತಪಾಸಣೆಗಾಗಿ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ, ಅವರು ಮಾಹಿತಿ ತಂದೊಪ್ಪಿಸುವಲ್ಲಿ ವಿಫಲರಾಗಿದ್ದಾರೆ.
ಮೂರನೇ ಹಂತದ ತಪಾಸಣೆಗೆ ಅಭ್ಯರ್ಥಿಯು ತಮ್ಮ ಲೆಕ್ಕಪುಸ್ತಕಗಳನ್ನು ಹಾಜರುಪಡಿಸಬೇಕಾಗಿತ್ತು. ಅಭ್ಯರ್ಥಿ ಅಥವಾ ಅಭ್ಯರ್ಥಿಯ ಅಧಿಕೃತ ಚುನಾವಣಾ ವೆಚ್ಚ ಪ್ರತಿನಿಧಿಯಾಗಲೀ ಹಾಜರಾಗಿ ಲೆಕ್ಕಪತ್ರ ಹಾಜರುಪಡಿಸಬೇಕಾಗಿತ್ತು. ಇದೀಗ ಚುನಾವಣಾ ವೆಚ್ಚದ ಲೆಕ್ಕವನ್ನು ನಿರ್ವಹಿಸಲು ವಿಫಲರಾಗಿದ್ದೀರೆಂದು ಭಾವಿಸಿ, ನಿಮ್ಮ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಭ್ಯರ್ಥಿಗೆ ತಿಳಿಸಿದ್ದಾರೆ.
ವಿಫಲ: ಶ್ರೀಲತಾ ಶೆಟ್ಟಿಯವರು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿದ್ದು, ಅವರು ಮೊದಲ ಹಾಗೂ ಎರಡನೇ ಹಂತದ ತಪಾಸಣೆಯನ್ನು ಈಗಾಗಲೇ ಮುಕ್ತಾಯಗೊಳಿಸಲಾಗಿದೆ. ಮೂರನೇ ಹಂತದ ತಪಾಸಣೆಯನ್ನು ಏ. 15ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಿ ತಿಳಿಸಿತ್ತು. ಆದರೆ, ಲೆಕ್ಕಪತ್ರ ಹಾಜರುಪಡಿಸಲು ವಿಫಲರಾಗಿದ್ದಾರೆ.
ಆದ್ದರಿಂದ ಜನತಾ ಪ್ರಾತಿನಿಧ್ಯ ಅಧಿನಿಯಮ 1951 ಪ್ರಕರಣ 77ರ ಅಡಿ ಅಗತ್ಯಪಡಿಸಲಾದಂತೆ ಚುನಾವಣಾ ವೆಚ್ಚದ ಲೆಕ್ಕ ನಿರ್ವಹಿಸಲು ವಿಫಲರಾಗಿದ್ದೀರೆಂದು ಭಾವಿಸಲಾಗಿದೆ. 3 ದಿನದೊಳಗಾಗಿ ಲೆಕ್ಕಪತ್ರ ತಪಾಸಣೆಗೆ ಹಾಜರಾಗಬೇಕು. ಇಲ್ಲವಾದಲ್ಲಿ ಅಭ್ಯರ್ಥಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಅಭ್ಯರ್ಥಿ ಅನಿಲ್ ಎಂ.ಆರ್. ಅವರು ಸಲ್ಲಿಸಿರುವ ಲೆಕ್ಕಪತ್ರ ಪುಸ್ತಕ ನಮೂನೆ-14ಬಿ ನಲ್ಲಿ ನಗದು ವ್ಯವಹಾರ ಅಥವಾ ಬ್ಯಾಂಕ್ ವ್ಯವಹಾರವನ್ನು ಸ್ಪಷ್ಟವಾಗಿ ಲೆಕ್ಕಪುಸ್ತಕದಲ್ಲಿ ತೋರಿಸಬೇಕಾಗಿದ್ದು, ಲೆಕ್ಕಪುಸ್ತಕ ಬಿ ಮತ್ತು ಸಿ ನಲ್ಲಿ ಯಾವುದೇ ಸ್ವೀಕೃತಿಯನ್ನು ನಮೂದಿಸದೇ ವೆಚ್ಚ ಭರಿಸಿರುವುದು ಕಂಡುಬಂದಿದೆ. ಈ ಲೋಪವನ್ನು ಸರಿಪ್ಚೊಕಂಡು ಲೆಕ್ಕಪುಸ್ತಕಗನ್ನು ಈ ಪತ್ರ ತಲುಪಿದ 3 ದಿನದ ಒಳಗಾಗಿ ಹಾಜರುಪಡಿಸಲು ತಿಳಿಸಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸೂಚಿಸಿದ್ದಾರೆ.