ನಿರುದ್ಯೋಗ ನಿವಾರಣೆಗೆ ಭಂಡಾರಿ ಶ್ರಮ
ಕ.ಪ್ರ.ವಾರ್ತೆ ಟಿ ಸಾಗರ ಟಿ ಏ.16
ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಕೊಡುಗೆಯಿಂದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅತ್ಯಧಿಕ ಮತಗಳನ್ನು ಪಡೆದು ಜಯಗಳಿಸಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ಇಲ್ಲಿನ ಇಕ್ಕೇರಿ ವೃತ್ತದಿಂದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಪರವಾಗಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರಾದ್ಯಂತ ಭಂಡಾರಿ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ನಡೆಸಿ, ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಮಾಜಸೇವೆ: ಕಾಂಗ್ರೆಸ್ ಪಕ್ಷದಲ್ಲಿ ಸತತ 35 ವರ್ಷಗಳಿಂದ ಸೇವೆ ಸಲ್ಲಿಸಿ, ಅನೇಕ ಯುವಜನರು ಪಕ್ಷದ ಚೌಕಟ್ಟಿನೊಳಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಮಂಜುನಾಥ ಭಂಡಾರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುವಜನರಿಗೆ ಸ್ವಯಂ ಉದ್ಯೋಗ ಹಾಗೂ ನಾಯಕತ್ವ ತರಬೇತಿ ನೀಡಿ ಅವರು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ತಮ್ಮ ಫೌಂಡೇಶನ್ ಮೂಲಕ ಅವರು ಪ್ರಯತ್ನ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆ ಪ್ರಜ್ಞಾವಂತರ ಕ್ಷೇತ್ರವಾಗಿದೆ. ವಿದ್ಯಾವಂತರೂ, ಸರಳ ಹಾಗೂ ಸಜ್ಜನಿಕೆಯುಳ್ಳ ಮಂಜುನಾಥ ಭಂಡಾರಿ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದರು.
ಜಿಲ್ಲೆಯ ಸಮಸ್ಯೆಗಳು: ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಬಗರ್ಹುಕುಂ, ಅರಣ್ಯ ಹಕ್ಕು ಕಾಯ್ದೆ ಯಶಸ್ವಿ ಅನುಷ್ಟಾನ ಹಾಗೂ ಅಡಕೆ ಬೆಳೆಗಾರರ ಪರವಾಗಿ ಸಂಸತ್ನಲ್ಲಿ ಧ್ವನಿ ಎತ್ತುವಲ್ಲಿ ಮಂಜುನಾಥ್ ಭಂಡಾರಿ ಯಶಸ್ವಿಯಾಗಲಿದ್ದು, ಮತದಾರರು ಅವರಿಗೆ ತಮ್ಮ ಆಶೀರ್ವಾದ ಮಾಡಬೇಕು ಎಂದು ಕೋರಿದರು.
ಎನ್ಎಸ್ಯುಐ ಅಧ್ಯಕ್ಷ ಅಬ್ದುಲ್ ಹಮೀದ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಬಲ ಕೌತಿ, ಪ್ರಮುಖರಾದ ತಾರಾಮೂರ್ತಿ, ಕರುಣಾಕರ, ಜಯರಾಮ್, ಭಾಸ್ಕರ ನಾಯಕ್, ತಾಪಂ ಸದಸ್ಯ ಮಹಾಬಲೇಶ್ವರ ಕುಗ್ವೆ, ನಗರಸಭಾ ಸದಸ್ಯ ರವಿ ಜಂಬಗಾರು, ಸಿದ್ದಪ್ಪ, ವಿಶ್ವನಾಥ ಕುಗ್ವೆ, ಸುಧಾಕರ ಕುಗ್ವೆ ಇನ್ನಿತರರು ಹಾಜರಿದ್ದರು.