ಮನೆ ಮನೆ ಪ್ರಚಾರಕ್ಕೆ ತೆರೆ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಏ.16
ಚುನಾವಣೆ ಹಿಂದಿನ ದಿನವಾದ ಬುಧವಾರ ವಿವಿಧ ಪಕ್ಷಗಳ ಪ್ರಮುಖರು, ಕಾರ್ಯಕರ್ತರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಮನೆಮನೆಗೆ ತೆರಳಿ ಅಂತಿಮ ಪ್ರಚಾರದ ಕಸರತ್ತು ನಡೆಸಿ ಮುಖಾಂತರ ಮತದಾರರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದರು.
ಪಟ್ಟಣದ ಹೊಂಡದಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ತಂಡ ಡಾ. ಶಂಕರಯ್ಯ, ಮಹದೇವಪ್ಪ ಮತ್ತು ಚಂದ್ರಶೇಖರ ಮಂಚಾಲಿ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದರೆ ಪಂಪ್ಹೌಸ್ ಕಾಲೋನಿಯಲ್ಲಿ ಪಪಂ ಮಾಜಿ ಅಧ್ಯಕ್ಷ ಚೆನ್ನವೀರ ಶೆಟ್ಟಿ ಹಾಗೂ ಬಿಜೆಪಿ ಮಾಜಿ ಟೌನ್ ಅಧ್ಯಕ್ಷ ಮಂಚಿ ಶಿವಣ್ಣ ನೇತೃತ್ವದಲ್ಲಿ ಮತಯಾಚನೆ ನಡೆಯಿತು. ಹಾಗೆಯೇ ಪಪಂ ಸದಸ್ಯರು ಪ್ರಮುಖರು ತಮ್ಮ ವಾರ್ಡ್ ಮತ್ತು ಬೂತ್ಗಳಲ್ಲಿ ಮತಯಾಚಿಸಿದರು.
ಮುಸ್ಲೀಮರ ಮತ ಬಿಜೆಪಿಗೆ ಬೀಳುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡುವದಾಗಿ ಹೊರಟಿರುವ ಪಪಂ ಮಾಜಿ ಸದಸ್ಯ ಎಸ್.ಎಂ. ಮಜೀದ್ ಮತ್ತು ಕಾನಿ ಅಯೂಬ ಸಾಬ್, ಕಾರ್ಪೆಂಟರ್ ಮಜುರು ಹಳೂರ್, ತಡಗಣಿ ಜಬ್ಬರ್ ಸಾಬ್ ಪ್ರತಿ ಮನೆಮನೆಗೆ ತೆರಳಿ ಬಿಜೆಪಿಗೆ ಮತ ಕೇಳಿದರು.
ಕಾಂಗ್ರೆಸ್ ಕಾರ್ಯಕರ್ತರ ಬಿರುಸಿನ ಪ್ರಚಾರ: ಹಿರೋಕೆರೂರ ರಸ್ತೆಯಲ್ಲಿ ಪಪಂ ಸದಸ್ಯರು ಹಾಗೂ ಕಾರ್ಯಕರ್ತರು ಪ್ರಚಾರ ನಡೆಸಿದರು. ಮೊದಲೇ ಪಕ್ಷಕ್ಕೆ ನಿಗದಿಯಾಗಿರುವ ಮತಗಳೊಂದಿಗೆ ಇತರ ಮತಗಳನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನ ನಡೆಸಿದರು.
ಹಾಗೆಯೇ ಜೆಡಿಎಸ್ ಪಕ್ಷದ ಕಾರ್ಯಕರ್ತರು ತಾಲೂಕು ಮುಖಂಡ ಹಿರೇಜಂಬೂರ್ ಚಂದ್ರಣ್ಣ ಅವರ ನೇತ್ರತ್ವದಲ್ಲಿ ಮತಯಾಚಿಸಿದರೆ ಪಟ್ಟಣದಲ್ಲಿ ಪಕ್ಷದ ಅಧ್ಯಕ್ಷ ಪರ್ವೇಜ್ ಮತ್ತು ಮಕಬುಬ್ ಸಾಬ್, ರಾಜಾಸಾಬ್ ನೇತೃತ್ವದಲ್ಲಿ ಮತಯಾಚಿಸಿದರು.
ಈ ಬಾರಿ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಮತದಾರರ ಮನವೊಲಿಸಿ ಹೆಚ್ಚು ಮತ ಪಡೆಯುವ ಕಸರತ್ತು ನಡೆಸಿದ್ದು, ನಾಳೆ ನಡೆಯುವ ಚುನಾವಣೆಯಲ್ಲಿ ಭವಿಷ್ಯ ನಿರ್ಧರಿಸಲಿದ್ದಾರೆ.