'ಸಮಾನತೆ ಹರಿಕಾರ ಡಾ.ಅಂಬೇಡ್ಕರ್'
ಸಾಗರ: ಡಾ. ಬಿ.ಆರ್. ಅಂಬೇಡ್ಕರ್ ಸಮಾನತೆ ಪ್ರತಿಪಾದಿಸುವ ಜೊತೆಗೆ ಶೋಷಣೆ ಸಮಾಜದಿಂದ ಕೊನೆಯಾಗಬೇಕು ಎಂಬ ಸಂಕಲ್ಪದೊಂದಿಗೆ ಹೋರಾಟ ಮಾಡಿದವರು ಎಂದು ನಗರಸಭೆ ಅಧ್ಯಕ್ಷೆ ಎನ್. ಲಲಿತಮ್ಮ ಹೇಳಿದರು.
ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮದಿನಾಚರಣೆಯನ್ನು ತಮಟೆ ಬಡಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾನತೆಯ ಹರಿಕಾರ: ದೇಶವಾಸಿಗಳಲ್ಲಿ ಸಮಾನತೆ ಬರಬೇಕು ಎನ್ನುವುದು ಅಂಬೇಡ್ಕರ್ ಅವರ ಪ್ರಮುಖ ಗುರಿಯಾಗಿತ್ತು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು ಹಾಗೂ ಮಹಿಳೆಯರಿಗೂ ಹಕ್ಕುಗಳು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ. ಅಂಬೇಡ್ಕರ್ ಅವರ ಆದರ್ಶ ಸರ್ವಕಾಲಕ್ಕೂ ಅನುಕರಣೀಯವಾಗಿದ್ದು, ಅದನ್ನು ಇಂದಿನ ಯುವಜನಾಂಗ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ರಾಜು, ಡಾ. ಅಂಬೇಡ್ಕರ್ ದಲಿತ ಸಮುದಾಯವನ್ನು ಶೋಷಣೆಯಿಂದ ಮುಕ್ತಗೊಳಿಸಲು ನಿರಂತರ ಶ್ರಮಿಸಿದವರು. ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿದ ಕೆಲವು ವಿಷಯಗಳ ಕೆಲವರಿಗೆ ಇಷ್ಟವಿರಲಿಲ್ಲ. ಆದರೂ ದೇಶಕ್ಕಾಗಿ ಅಗತ್ಯ ಕಾನೂನು ರೂಪಿಸುವಲ್ಲಿ ಅವರು ಹಿಂದೆ ಬಿದ್ದಿಲ್ಲ ಎಂದರು.
ಸಂವಿಧಾನ ಗೌರವಿಸಿ: ಪ್ರಜಾಪ್ರಭುತ್ವ ದೇವಸ್ಥಾನವಿದ್ದಂತೆ. ಸಂವಿಧಾನಕ್ಕೆ ಶ್ರೇಷ್ಠತೆ ತರುವ ಕೆಲವು ಅಂಶಗಳನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ನಮಗಾಗಿ, ನಮ್ಮ ಉದ್ದಾರಕ್ಕಾಗಿ ಇರುವ ಸಂವಿಧಾನಕ್ಕೆ ಅಗೌರವ ಮಾಡಿದರೆ, ಅಂಬೇಡ್ಕರ್ಗೆ ಅವಮಾನ ಮಾಡಿದಂತೆ. ಸಂವಿಧಾನದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅಗತ್ಯ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾತೃಭೂಮಿ ಟ್ರಸ್ಟ್ ಅಧ್ಯಕ್ಷ ರವಿ ಕುಗ್ವೆ, ರೈತ ಮುಖಂಡ ಎನ್.ಡಿ. ವಸಂತಕುಮಾರ್, ಕಿಯೋನಿಕ್ಸ್ನ ರೊಮೆಲ್ಲೋ, ದ್ಯಾವಪ್ಪ ಕೆಳದಿ ಉಪಸ್ಥಿತರಿದ್ದರು. ವಸಂತ ಕುಗ್ವೆ ಪ್ರಾರ್ಥಿಸಿದರು. ವೈ.ಎನ್. ಹುಬ್ಬಳ್ಳಿ ಸ್ವಾಗತಿಸಿದರು. ಪರಮೇಶ್ವರ ದೂಗೂರು ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ವಂದಿಸಿದರು. ಪ್ರಭಾಕರ್ ನಿರೂಪಿಸಿದರು.
ಭದ್ರಾವತಿಯಲ್ಲಿ...
ಭದ್ರಾವತಿ: ಭದ್ರಾವತಿಯ ಕುರುಬರ ಬೀದಿಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಹಾರಾಜ ಕಾಲೋನಿ ನಾಗರಿಕರು ಪಟ್ಟಣದ ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗೂ ಭಾರತ ಸಂವಿಧಾನ ಹಕ್ಕುಗಳ ಹೋರಾಟ ವೇದಿಕೆ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಉಪನ್ಯಾಸಕ ಶಿವಬಸಪ್ಪ ಸಮಾಜದಲ್ಲಿ ಬಡಜನರ ಮತ್ತು ದಲಿತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅಸ್ಪ್ರಶ್ಯತೆ ಹೋಗಲಾಡಿಸಿದ ಧೀಮಂತ ನಾಯಕ ಅಂಬೇಡ್ಕರ್ ಎಂದು ತಿಳಿಸಿದರು.
ಮುಖ್ಯ ಅತಿಥಿ ಸುರೇಶ್ ಮಾತನಾಡಿ, ಅಂಬೇಡ್ಕರ್ ಅವರ ತತ್ವ- ಸಿದ್ಧಾಂತ ಅಳವಡಿಸಿಕೊಂಡು ಬಡವರ ಹಕ್ಕುಗಳಿಗಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ರಾಜೀವ್ ಗಾಂಧಿ ಬಿಎಡ್ ಕಾಲೇಜಿನ ಪ್ರಾಂಶುಪಾಲ ಹನುಮಂತಪ್ಪ ಮಾತನಾಡಿದರು. ಎಂ. ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ್, ಗುರುಸ್ವಾಮಿ, ಇ. ಚಂದ್ರಶೇಖರನ್, ಭಾರತ ಸಂವಿಧಾನ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಎಸ್. ಮಂಜುನಾಥ್ ಮೊದಲಾದವರು ಇದ್ದರು. ಎನ್. ಮಂಜುನಾಥ್ ನಿರೂಪಿಸಿದರು. ಮಹಾದೇವಪ್ಪ ವಂದಿಸಿದರು.