ಗಾಮದಲ್ಲಿ ಅವಳಿ ಹಸುಗಳ ಅದ್ಧೂರಿ ಸೀಮಂತ
ಕ.ಪ್ರ.ವಾರ್ತೆ, ಶಿಕಾರಿಪುರ, ಏ.19
ತಾಲೂಕಿನ ಗಾಮ ಗ್ರಾಮದಲ್ಲಿ ಶನಿವಾರ ಅತ್ಯಂತ ಸಂಭ್ರಮ, ಸಡಗರ. ಹಬ್ಬದ ವಾತಾವರಣ. ಗೌಡರ ಬೀದಿಯಲ್ಲಿನ ಬಸವರಾಜಯ್ಯ ಅವರ ಮನೆ ಮುಂಭಾಗದಿಂದ ಇಡೀ ಬೀದಿಗೆ ಶಾಮಿಯಾನ. ಗ್ರಾಮಸ್ಥರೆಲ್ಲರಿಗೂ ಊಟ, ಉಪಚಾರ, ಬಂಧು ಬಳಗದವರ ಉಪಸ್ಥಿತಿ. ಗುರುಗಳಿಂದ ಮಂತ್ರ ಸ್ತೋತ್ರ ಪಠಣ, ಸುಮಂಗಲಿಯರಿಂದ ಆರತಿ ಮತ್ತಿತರ ವಿವಿಧ ಕಾರ್ಯಕ್ರಮ...
ಇದೇನಪ್ಪಾ ಇಂತಹ ಅಸಾಧಾರಣ ಕಾರ್ಯಕ್ರಮ ಎಂದುಕೊಂಡಿದ್ದೀರಾ? ಅದು ಸೀಮಂತ ಕಾರ್ಯಕ್ರಮ. ಮಹಿಳೆಗಲ್ಲ, ಬಸವರಾಜಯ್ಯ ಅವರ ಮನೆಯ ಅವಳಿ ಜವಳಿ ಹಸುವಿನ ಏಕಕಾಲದ ಸೀಮಂತದ ಸಂಭ್ರಮ!
ಹೌದು. ಜಾನುವಾರುಗಳೆಂದರೆ ರೈತರಿಗೆ ಎಲ್ಲಿಲ್ಲದ ಪ್ರೀತಿ ಎಂಬುದಕ್ಕೆ ಇದು ಇನ್ನೊಂದು ಸಾಕ್ಷಿಯಷ್ಟೆ. ಪ್ರತಿ ವರ್ಷ ಜಾನುವಾರುಗಳ ಮುಂದಾಳತ್ವದಲ್ಲೇ ಹಲವಾರು ಉತ್ಸವಗಳು ನಡೆಯುತ್ತವೆ. ಬಸವನ ತುಲಾಭಾರ ನಡೆಸಲಾಗುತ್ತದೆ. ದೇವರ ಎತ್ತಿನ ಕೊಂಬಿಗೆ ಕಂತೆ ಕಂತೆ ಹಣ ಕಟ್ಟಿ ಭಕ್ತಿ ಸಮರ್ಪಿಸಲಾಗುತ್ತಿದೆ. ಅಂತೆಯೇ ಇದೂ ಒಂದು ಜಾನುವಾರು ಪ್ರೀತಿಯ ವಿಶೇಷ ಕಾರ್ಯಕ್ರಮ.
ಗ್ರಾಮಸ್ಥರ ಸಾಥ್: ಗಾಮದ ಬಸವರಾಜಯ್ಯ ಅವರ ಮನೆಯಲ್ಲಿ ಅವಳಿ ಜವಳಿ ಹಸು ಮೇಲಿನ ಪ್ರೀತಿ ನಿಜಕ್ಕೂ ವಿಶೇಷ. ಅವಳಿ ಜವಳಿ ಹಸುಗಳು ಬದುಕುವುದು ಕಷ್ಟ. ಬದುಕಿದರೂ ಅವುಗಳು ಒಟ್ಟಿಗೆ ಬೆಳೆಯುವುದಿಲ್ಲ ಎಂಬ ಮಾತಿದೆ. ಇದಕ್ಕೆ ಅಪವಾದ ಎಂಬಂತೆ ಈಗ ಏಕಕಾಲದಲ್ಲಿ ಗರ್ಭ ಧರಿಸಿ ತಾಯ್ತನಕ್ಕೆ ಸಿದ್ಧವಾಗಿರುವ ಹಸುಗಳಿಗೆ ಸೀಮಂತ ಕಾರ್ಯಕ್ರಮ ಮೂಲಕ ಮಾನವೀಯತೆ ಮೆರೆಯಲಾಗಿದೆ. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಂಭ್ರಮ, ಕುತೂಹಲದಿಂದಲೇ ಭಾಗವಹಿಸಿದ್ದರು. ಮಹಿಳೆಯರು ಸಾಮೂಹಿಕವಾಗಿ ಹಸುಗಳಾದ ಗಂಗೆ, ಗೌರಿಗೆ ಆರತಿ ಬೆಳಗಿದರು. ಹಿಂದೂ ಸಂಪ್ರದಾಯದಂತೆ ಸೀಮಂತ ಕಾರ್ಯಗಳನ್ನೂ ನೆರವೇರಿಸಿದರು.
ಗುರುಗಳಾದ ಮಹಾಂತಯ್ಯಸ್ವಾಮಿ ಹಿರೇಮಠ್ ಹಾಗೂ ಸೋಮಶೇಖರ್ ಸ್ವಾಮಿ ಹಿರೇಮಠ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರುಗಿತು. ಬಸವರಾಜಯ್ಯ ಅವರ ಮಗ ಮತ್ತು ಸೊಸೆ ಹಸುಗಳಿಗೆ ಹಸಿರು ಸೀರೆ, ಬಳೆ, ಜಾಕೇಟ್‌ಗಳಿಂದ ಸಿಂಗರಿಸಿದರು. ಶಾಮಿಯಾನ ನೆರಳಲ್ಲಿ ಸೀಮಂತ ಕಾರ್ಯ ನೆರವೇರಿಸಿ, ನೂರಾರು ಗ್ರಾಮಸ್ಥರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದರು. ಹಾಲಿನಿಂದ ತಯಾರಿಸಿದ ರುಚಿಯಾದ ಖಾದ್ಯದಿಂದ ಅತಿಥಿಗಳನ್ನು ಸತ್ಕರಿಸಿದರು.
ಗ್ರಾಮದ ಮಂಜಪ್ಪ,ಹಸುವಿನ ಆಹಾರ ವೆಚ್ಚದಲ್ಲಿ ವಿಪರೀತ ಏರಿಕೆಯಾಗಿದ್ದು ಪೂರಕವಾಗಿ ಹಾಲಿನ ಬೆಲೆ ಏರಿಕೆಯಾಗದೆ ಹೈನುಗಾರಿಕೆಯನ್ನು ರೈತ ಅವಲಂಭಿಸುವುದು ಕಷ್ಟಕರವಾಗಿದ್ದು ಇಂತಹ ಸ್ಥಿತಿಯಲ್ಲಿ ಸೀಮಂತ ಕಾರ್ಯ ಭಾರತೀಯ ಧಾರ್ಮಿಕ ಪದ್ದತಿಯ ಮನವರಿಕೆ ಮೂಲಕ ಗೋವುಗಳ ಸಂತತಿಯನ್ನು ಅಭಿವೃದ್ದಿಪಡಿಸುವ ಕ್ರಮವಾಗಿದೆ ಎಂದರು. ಹಿರಿಯ ಪಶು ವೈದ್ಯ ಮುಗಳಿ ಶೆಟ್ಟಿ,ಗ್ರಾಮದ ನಾಗರಾಜ್,ಶಿವಪ್ಪ,ನೂರುಲ್ಲಾ,ಜಗದೀಶ್ಮ್‌ತ್ತಿತರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.