ದೈವತ್ವ ಭಾವದಿಂದ ದುರ್ಗುಣ ನಿಗ್ರಹ
ಕ.ಪ್ರ.ವಾರ್ತೆ ಸೊರಬ ಏ.20
ಮಾನಸಿಕ ಮತ್ತು ದೈಹಿಕವಾಗಿ ಮಾನವನನ್ನು ದೃಢಗೊಳಿಸಲು ಸೇವಾಮನೋಭಾವ ನೆರವಾಗುತ್ತದೆ ಎಂದು ಜಡೆ ಕಾಲೇಜಿನ ಕಾರ್ಯದರ್ಶಿ ಸಿ. ಶಿವಕುಮಾರ್ ಹೇಳಿದರು.
ಪಟ್ಟಣದ ಮುರುಘಾಮಠದಲ್ಲಿ ಜಡೆ ಸಂಸ್ಥಾನ ಮಠದ ವತಿಯಿಂದ ಹಮ್ಮಿಕೊಂಡಿದ್ದ 95ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.
ಜಡೆ ಕಾಲೇಜಿನ ನಿವೃತ್ತ ಪ್ರಾಶುಪಾಲ ಜಯಶೀಲಗೌಡ ಮಾತನಾಡಿ, ಹಣವಂತರು ಮಾತ್ರ ಇದ್ದರೆ ಉಪಯೋಗವಿಲ್ಲ. ಅವರು ಉದಾರಿಗಳಾಗಿರಬೇಕು. ಇಂತಹ ಉದಾರಿಗಳನ್ನು ಒಟ್ಟು ಮಾಡುವ ಕೆಲಸವನ್ನು ಮಾಡುವ ಮೂಲಕ ನಮ್ಮ ಪಾರಂಪರಿಕ ಮೌಲ್ಯ ಎತ್ತಿ ಹಿಡಿಯಬೇಕು ಎಂದರು.
ಬ್ಯಾಡಗಿ ಮುಪ್ಪಿನಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಭೌತಿಕವಾಗಿ ಶ್ರೀಮಂತರಾಗಿದ್ದೇವೆ. ಆದರೆ, ನಾವು ಆಂತರಿಕವಾಗಿ ಶ್ರೀಮಂತರಾಗುತ್ತಿಲ್ಲ. ದೈವತ್ವ ಭಾವನೆ ಮನಸ್ಸಿನ ತೊಳಲಾಟವನ್ನು ನಿಗ್ರಹಿಸುವುದರ ಜತೆಗೆ ಏಕಾಗ್ರತೆ ಮತ್ತು ಮನುಷ್ಯನಲ್ಲಿನ ದುರ್ಗಣ ಹೋಗಲಾಡಿಸುವ ಶಕ್ತಿ ಇದೆ ಎಂಬುದನ್ನು ಅರಿತು ನಡೆಯುವುದು ಸೂಕ್ತ ಎಂದರು.
ಮುಸಲ್ಮಾನರು, ಕ್ರಿಶ್ಚಿಯನ್ನರು ಪ್ರಾರ್ಥನೆಗೆ ನೀಡಿದಷ್ಟು ಮಹತ್ವವನ್ನು ಹಿಂದೂ ಧರ್ಮೀಯರು ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ನಮ್ಮ ಮನಸ್ಥಿತಿ ಕುಗ್ಗಿದರೆ ಅನಾರೋಗ್ಯ ಉಂಟಾಗುತ್ತದೆ. ಇಂದು ಅತಿ ಹೆಚ್ಚು ಜನರಿಗೆ ಅನಾರೋಗ್ಯ ಇರುವುದು ಮನಸ್ಸಿನ ಸ್ಥಿತಿಯಿಂದ. ಮನಸ್ಸಿಗೆ ಸರಿಯಾದ ಆರೋಗ್ಯ ಇಲ್ಲದಿದ್ದರೆ ಸಂಪೂರ್ಣ ಆರೋಗ್ಯವಂತ ವ್ಯಕ್ತಿಯಾಗಿರಲು ಸಾಧ್ಯವಿಲ್ಲ ಎಂದ ಅವರು, ಮನಸ್ಸಿನ ಅಂತರ್ಯವನ್ನು ಪುನಃ ಪಡೆಯಲು ಇಂತಹ ಶಿವಾನುಭವ ಕಾರ್ಯಕ್ರಮಗಳು ವಿಶೇಷ ಅರ್ಥವನ್ನು ಪಡೆದಿದೆ ಎಂದರು.
ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ತಾನು ದುಡಿದ ಸ್ವಲ್ಪ ಭಾಗವನ್ನು ದೇಣಿಗೆಯಾಗಿ ನೀಡಿದರೆ ಸಮಾಜದ ಏಳ್ಗೆ ಸಾಧ್ಯ. ಪಟ್ಟಣದಲ್ಲಿ ಜಡೆ ಮಠದ ವತಿಯಿಂದ ಮಹಿಳಾ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸುವ ಹಾಗೂ ಕಲ್ಯಾಣ ಮಂದಿರವನ್ನು ನಿರ್ಮಾಣ ಮಾಡುವ ಯೋಚನೆ ಇದೆ ಎಂದರು.
ತಿಳವಳ್ಳಿಯ ವಿರಕ್ತಮಠದ ನಿರಂಜನಪ್ರಭು ಮಾತನಾಡಿದರು. ಇದೇ ವೇಳೆ ಪಪಂ ಮಾಜಿ ಸದಸ್ಯ ದಿನಕರ ಭಟ್ ಭಾವೆ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.
ಹಾಲೇಶ ನವುಲೆ ಸ್ವಾಗತಿಸಿದರು. ಚನ್ನಬಸಪ್ಪ ಭಕ್ತಿಗೀತೆ ಗಾಯನ ನಡೆಸಿಕೊಟ್ಟರು. ನಟರಾಜ ವಂದಿಸಿದರು. ನಿಜಗುಣ ಚಂದ್ರಶೇಖರ ನಿರೂಪಿಸಿದರು.