ನೀರಿಲ್ಲದೆ ಕಂಗೆಟ್ಟ ಕಾಡುಪ್ರಾಣಿಗಳು
ಚನ್ನಗಿರಿ: ಚನ್ನಗಿರಿ ವಲಯ ಅರಣ್ಯ ಪ್ರದೇಶದ ಕಾಡು ಪ್ರಾಣಿಗಳು ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ದಾಹ ತಣಿಸಿಕೊಳ್ಳಲು ನೀರು ಹುಡುಕಿಕೊಂಡು ಗ್ರಾಮೀಣ ಪ್ರದೇಶದ ಕಡೆ ಬರುವ ದಿನಗಳು ದೂರವಿಲ್ಲ.
ಚನ್ನಗಿರಿ ವಲಯ ಅರಣ್ಯ ಪ್ರದೇಶ ಸುಮಾರು 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದು, ಕಾಡಿನ ಮಧ್ಯದಲ್ಲಿ ಅಲ್ಲಲ್ಲಿ ಇರುವ ಕೆರೆಗಳೆಲ್ಲವೂ ಬತ್ತಿ ಹೋಗಿದೆ. ಈ ಅರಣ್ಯ ಪ್ರದೇಶ ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿದು, ಆ ಭಾಗದ ಪ್ರಾಣಿಗಳು ಈ ಭಾಗದಲ್ಲಿಯೂ ಸಂಚರಿಸಿಕೊಂಡಿವೆ.
ಈ ವಲಯ ಅರಣ್ಯ ಪ್ರದೇಶದ ಮಧ್ಯ ಭಾಗವಾದ ಕರಲು ಬಕ್ಕೆ ಎಂಬ ಅರಣ್ಯ ಪ್ರದೇಶದ ಕಾಡಿನ ಕೊರಕಲಲ್ಲಿ ಗುಡ್ಡದ ಮೇಲಿನ ನೀರು ಝರಿ ರೂಪದಲ್ಲಿ ಸಣ್ಣಗೆ ಹರಿಯುತ್ತಿದೆ.
ಡ್ಯಾಂ ಅಗತ್ಯ: ಹರಿಯುತ್ತಿರುವ ನೀರಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿದರೆ ಮಾತ್ರ ಕಾಡಿನ ಮಧ್ಯದಲ್ಲಿ ಬಾಯಾರಿ ಬಳಲುವ ಪ್ರಾಣಿಗಳಿಗೆ ಜೀವ ಜಲವಾಗಿ ನೀರು ಸಿಗುವುದು. ಇಲ್ಲವಾದರೆ ಈ ಪ್ರಾಣಿಗಳು ಬಾಯಾರಿ ಊರಿಗೆ ದಾಳಿ ಇಡದಿರದು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಈ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ತುರ್ತಾಗಿ ಮಾಡಬೇಕಾಗಿದೆ.
ವನ್ಯ ಪ್ರಾಣಿಗಳ ರಕ್ಷಣೆ ಮಾಡುವುದು ಒಂದೆಡೆಯಾದರೆ ಅಮೂಲ್ಯವಾದ ಅರಣ್ಯ ಸಂಪತ್ತನ್ನು ರಕ್ಷಿಸುವ ಹೊಣೆ ಇನ್ನೊಂದೆಡೆ. ಒಟ್ಟಾರೆ ಈ ಅರಣ್ಯ ಪ್ರದೇಶ ಮುಂದಿನ 25ವರ್ಷದ ನಂತರ ಮರ, ಗಿಡ, ಪ್ರಾಣಿಗಳನ್ನು ಈ ಪ್ರದೇಶದಲ್ಲಿ ಇದ್ದವು ಎಂದು ಭೂಪಟದಲ್ಲಿ ನೋಡುವ ದಿನಗಳು ದೂರವಿಲ್ಲ.
ನಿಲ್ಲದ ಮರಗಳ್ಳತನ: ಅರಣ್ಯ ಇಲಾಖೆಯಲ್ಲಿರುವ ಕೆಲವು ಸಿಬ್ಬಂದಿ, ಕೆಲವು ಸಂರಕ್ಷಿತ ಅರಣ್ಯ ಪ್ರದೇಶದ ಮಧ್ಯದಲ್ಲಿ ಕಾಡು ಕಾಯಲು ಕ್ಯಾಂಪ್ ಹಾಕಿಕೊಂಡು ಕಾಯುತ್ತಿದ್ದಾರೆ, ಆದರೂ ಮರಗಳ್ಳತನ ನಡೆಯುತ್ತಲೇ ಇರುವುದನ್ನು ಕಾಡಿನಲ್ಲಿ ಹೋಗಿ ನೋಡಿದಾಗ ಇದರ ಸ್ಥಿತಿ ತಿಳಿಯುತ್ತದೆ.
ವಿಶಾಲವಾದ ಕಾಡಿನ ಒಂದು ಬದಿಯಲ್ಲಿ ಮರಗಳ್ಳರು ಬಂದರೆ ಆ ಪ್ರದೇಶಕ್ಕೆ ಸಿಬ್ಬಂದಿ ಹೋಗುವ ತನಕ ಆಧುನಿಕ ಯಂತ್ರಗಳಿಂದ ಮರಗಳನ್ನು ಕಡಿದುಕೊಂಡು ಹೋಗುತ್ತಾರೆ. ಕಾಡಿನ ಮಧ್ಯದಲ್ಲಿ ಇರುವ ಕುಕ್ಕುವಾಡೇಶ್ವರಿ ದೇವಾಲಯಕ್ಕೆಂದು ಬರುವ ಕೆಲವರು ಮರಗಳನ್ನು ಕಡಿದುಕೊಂಡು ಹೋಗುತ್ತಾರೆ. ಕಾಡಿನ ಮಧ್ಯದಲ್ಲಿ ಬಾಡೂಟದ ಅಡುಗೆ ತಯಾರಿಸುವ ಭಕ್ತರು ಹೊತ್ತಿಸಿದ ಬೆಂಕಿಯ ಒಲೆಯನ್ನು ನಂದಿಸದೆ ಹೋಗುವುದರಿಂದ ಕೆಲವು ಸಲ ಕಾಡಿಗೆ ಬೆಂಕಿ ಬೀಳುತ್ತಲೇ ಇರುತ್ತದೆ.
ಸಂಪದ್ಭರಿತ ಗಿಡಮೂಲಿಕೆ: ಇಂತಹ ಸಂಪದ್ಭರಿತ ಅರಣ್ಯ ಪ್ರದೇಶಗಳಲ್ಲಿ ಬೆಲೆಬಾಳುವ ಗಿಡಗಳಿಂದ ಹಿಡಿದು ನಾಟಿ ಔಷಧಿ ತಯಾರಿಸುವ ಗಿಡಮೂಲಿಕೆಗಳೂ ಇವೆ. ಇಲ್ಲಿ ಬೆಲೆ ಬಾಳುವ ಬೀಟೆ, ಸಾಗುವಾನಿ, ಉನಾಲ, ಕರಿಮತ್ತಿ, ಕಾಡು ಬೇವು ಮತ್ತು ದೈತ್ಯಾಕಾರದ ಕಾಡು ಜಾತಿಯ ಗಿಡಗಳು ಹೆಚ್ಚಾಗಿವೆ.
ಇದರಲ್ಲಿ ಹೆಚ್ಚು ಭಾಗ ಸಾಗುವಾನಿಯ ದೈತ್ಯ ಮರಗಳು ಕಳ್ಳರ ಪಾಲಾಗಿದ್ದು, ಇಂತಹ ಮರಗಳನ್ನು ಕಡಿದ ಬುಡಗಳಿಂದ ಬೆಳೆಯುತ್ತಿರುವ ಟಿಸಿಲು ಮರಗಳನ್ನು ಮಾತ್ರ ನೋಡಬಹುದಾಗಿದೆ.ಶೀಘ್ರದಲ್ಲಿಯೇ ಅಳಿದುಳಿದ ಈ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡದೆ ಹೋದರೆ ಅರಣ್ಯದ ನಾಶ ಖಂಡಿತ.