ಬಡವರಿಗೆ ವಸತಿ ಕಲ್ಪಿಸಲು ಸರ್ಕಾರ ಬದ್ಧ
ದಾವಣಗೆರೆ: ಮಳೆ, ಗಾಳಿಯ ಅಬ್ಬರದಿಂದ ಅಕ್ಷರಶಃ ಬೀದಿ ಪಾಲಾಗಿರುವ ಇಲ್ಲಿನ ಹಳೆ ಚಿಕ್ಕನಹಳ್ಳಿ ಪ್ರದೇಶದ ನಿರಾಶ್ರಿತರು ವಾಸಿಸುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಉತ್ತರ ಶಾಸಕ ಎಸ್ಸೆಸ್ ಮಲ್ಲಿಕಾರ್ಜುನ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ನೊಂದ ಜನರ ಅಹವಾಲು ಆಲಿಸಿದರು.
ನಗರದ ಎಪಿಎಂಸಿ ಹಿಂಭಾಗದ ಹಳೆ ಚಿಕ್ಕನಹಳ್ಳಿ ಪ್ರದೇಶದಲ್ಲಿ ಒಂದು ಕಡೆ ಹಳ್ಳ, ಮತ್ತೊಂದು ಕಡೆ ಚರಂಡಿ ಹೀಗೆ ಎರಡರ ಮಧ್ಯೆ ತಾತ್ಕಾಲಿಕ ತಗಡಿನ ಶೆಡ್ಗಳಲ್ಲಿ ಜೀವನ ನಡೆಸುತ್ತಿರುವ 274 ಕುಟುಂಬ ಸಂತ್ರಸ್ತರಾದ ಹಿನ್ನೆಲೆಯಲ್ಲಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಶಾಸಕ ಎಸ್ಸೆಸ್ ಮಲ್ಲಿಕಾರ್ಜುನ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಊಟ, ವಸತಿ ವ್ಯವಸ್ಥೆ: ಹಳೆ ಚಿಕ್ಕನಹಳ್ಳಿಯಲ್ಲಿ ಭಾರಿ ಗಾಳಿಗೆ ತಗಡಿನ ಶೀಟ್ ಹಾರಿಹೋಗಿದ್ದು, ಮಕ್ಕಳು, ಮಹಿಳೆಯರು, ವಯೋ ವೃದ್ಧರು ಘಟನೆ ಬಗ್ಗೆ ಸಚಿವ ಡಾ. ಶಾಮನೂರು, ಶಾಸಕ ಎಸ್ಸೆಸ್ ಮಲ್ಲಿಕಾರ್ಜುನ ಗಮನಕ್ಕೆ ತಂದರು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ, ಊಟ, ವಸತಿಗೆ ವ್ಯವಸ್ಥೆ ಮಾಡಲು ಸಚಿವ, ಶಾಸಕರು ತಿಳಿಸಿದರು.
ಸಚಿವ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಅಕಾಲಿಕ ಮಳೆ, ಗಾಳಿಯಿಂದಾಗಿ ಹಳೆ ಚಿಕ್ಕನಹಳ್ಳಿ ಸಂತ್ರಸ್ತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಮಾನವೀಯ ದೃಷ್ಟಿಯಿಂದ ಇವರಿಗೆ ನೆರವಿನ ಹಸ್ತ ಚಾಚಬೇಕಾಗಿದ್ದುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಪಕ್ಕದ ರೇಷ್ಮೆ ಇಲಾಖೆ ಕಟ್ಟಡದಲ್ಲಿ ಊಟ, ತಿಂಡಿ, ಟೀ ವ್ಯವಸ್ಥೆ, ವಸತಿಗೆ ಸೌಕರ್ಯ ಕಲ್ಪಿಸಿದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಸಂತ್ರಸ್ತ 47 ಕುಟುಂಬಗಳಿಗೆ ತಲಾ 15 ಸಾವಿರ ಪರಿಹಾರ ವಿತರಿಸಲಾಗುವುದು. ತಾಲೂಕು ಆಡಳಿತ, ಪಾಲಿಕೆಯಿಂದ ಗಂಜಿ ಕೇಂದ್ರದ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ಜನರ ಕಷ್ಟಸುಖ ಅರಿಯಲು ತಾವು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.
ನಗರದ ಸನಿಹದಲ್ಲಿ 10- 12 ಲಕ್ಷಕ್ಕೆ ಎಕರೆಯಂತೆ ಜಾಗ ಸಿಕ್ಕರೆ ಖರೀದಿಸಿ, ಬಡವರಿಗೆ ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 20- 25 ಸಾವಿರ ಅಕ್ರಮ ಮನೆಗಳಿವೆ.
ಅದೆಲ್ಲವನ್ನು ಈ ವರ್ಷಾಂತ್ಯದೊಳಗೆ ಸಕ್ರಮಗೊಳಿಸಲು ಕಾಲಾವಕಾಶ ನೀಡಿದ್ದೇವೆ. ಆದಷ್ಟು ಬೇಗ ಇದು ಕಾರ್ಯ ರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಶ್ವತ ಪರಿಹಾರ ಚಿಂತನೆ: ಸಚಿವರು ತೆರಳಿದ ನಂತರ ಅಲ್ಲಿಗೆ ಭೇಟಿ ನೀಡಿದ್ದ ಉತ್ತರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ, ಸಂತ್ರಸ್ತರಿಗೆ ಗಂಜಿ ಕೇಂದ್ರದಲ್ಲಿ ಊಟ, ತಿಂಡಿಗೆ ಯಾವುದೇ ವ್ಯತ್ಯಾಸವಾಗಬಾರದು. ಆದಷ್ಟು ಬೇಗ ಪುನರ್ವಸತಿ ಕಲ್ಪಿಸಲಾಗುವುದು.
ಆದಷ್ಟು ಬೇಗ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಆವರಗೆರೆ ಎಚ್.ಜಿ. ಉಮೇಶ, ತಹಸೀಲ್ದಾರ್ ಮಂಜುನಾಥ ಬಳ್ಳಾರಿ, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ಉಪ ಆಯುಕ್ತರಾದ ಮಾಲತೇಶ, ಜಿ.ಎಂ. ರವೀಂದ್ರ, ಎಇಇ ಸೋಮಶೇಖರ, ಎಇ ಕೃಷ್ಣಮೂರ್ತಿ, ಆರ್ಐ ಶಕೀಲ್, ವಿಎ ಬಸವರಾಜ ಆವರಗೆರೆ, ಸಮೀವುಲ್ಲಾ, ಆಲೂರು ನಾಗಪ್ಪ, ರೇವಣಪ್ಪ, ಜಗದೀಶ, ಹನುಮಂತಪ್ಪ, ತಿಮ್ಮೇಶ, ಶಿವು, ಮಂಜುನಾಥ, ಶಕೀಲಮ್ಮ, ಸುಗುಣಮ್ಮ, ಶಾರದಮ್ಮ, ರತ್ನಮ್ಮ, ಮಮ್ತಾಜ್, ಅಜ್ಜು, ಮುಬೀನಾಬಾನು, ಇರ್ಫಾನ್, ಹಾಜರಿದ್ದರು.