ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮನುಷ್ಯನಲ್ಲಿ ದಿನದಿಂದ ದಿನಕ್ಕೆ ರೋಗನಿರೋಧಕ ಶಕ್ತಿ ಕಡಿತ

Rashmi Kasaragodu
Updated On : 22 Apr 2014, 10:44 am

ಶಿವಮೊಗ್ಗ: ಔಷಧೀಯ ಸಸ್ಯಗಳ ಮಹತ್ವ ಸಾರುವ ಮತ್ತು ಅವುಗಳನ್ನು ಸಂರಕ್ಷಿಸುವ ದಿಕ್ಸೂಚಿ ನೀಡುವಂತಹ ಮಹತ್ವದ ಸಮ್ಮೇಳನ ಇಲ್ಲಿನ ಸಹ್ಯಾದ್ರಿ ಕಾಲೇಜಿನಲ್ಲಿ ಸೋಮವಾರ ನಡೆಯಿತು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಾಸಾಯನಶಾಸ್ತ್ರ ವಿಭಾಗ ಹಮ್ಮಿಕೊಂಡ ಔಷಧೀಯ ಸಸ್ಯಗಳ ಮೌಲ್ಯವರ್ಧನೆ ಕುರಿತ ಸಮ್ಮೇಳನದಲ್ಲಿ ನಮ್ಮ ಸುತ್ತಮುತ್ತಲಿರುವ ಹಾಗೂ ಔಷಧೀಯ ಸಸ್ಯಗಳ ವಿಚಾರದಲ್ಲಿ ಪಶ್ಚಿಮಘಟ್ಟದ ಮಹತ್ವ ತಿಳಿಸುವ ಪ್ರಯತ್ನವನ್ನು ಸಂಪನ್ಮೂಲ ವ್ಯಕ್ತಿಗಳು ಮಾಡಿದರು. ಹಾಗೆಯೇ ಔಷಧೀಯ ಸಸ್ಯಗಳ ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು.
ಸಮ್ಮೇಳನ ಉದ್ಘಾಟಿಸಿದ ದಾವಣಗೆರೆ ವಿಶ್ವ ವಿದ್ಯಾನಿಲಯದ  ಕುಲಪತಿ ಪ್ರೊ. ಬಿ.ಬಿ. ಕಲಿವಾಳ್ ಮಾತನಾಡಿ, ನಮ್ಮಲ್ಲಿ  ಲಕ್ಷಗಟ್ಟಲೆ ಔಷಧೀಯ ಗುಣವುಳ್ಳ ಸಸ್ಯಗಳು ಇವೆ. ಆದರೆ ಅವುಗಳನ್ನು ಬಳಕೆ ಮಾಡದೆ ಅಲೋಪತಿ ಔಷಧ ಬಳಕೆ ಹೆಚ್ಚಾಗಿ ಕಾಣುತ್ತಿದೆ ಎಂದ ಅವರು, ಇದರಿಂದ ದೇಹದ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದಾದ ಸಾಧ್ಯತೆ ಇದೆ ಎಂದು ಹೇಳಿದರು.
ಉತ್ತಮ ಆರೋಗ್ಯ: ಇಂದು ಮಾನವ ದಿನದಿಂದ ದಿನಕ್ಕೆ ತನ್ನ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಇದರಿಂದಾಗಿ ಬಹು ಬೇಗನೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ ಎಂದ ಅವರು, ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಔಷಯ ಸಸ್ಯಗಳಲ್ಲಿ ಇದೆ. ಅವುಗಳ ಬಳಕೆ ಆಗಬೇಕು ಇದು ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರಪಂಚದಲ್ಲಿರುವ ಪ್ರತಿಯೊಂದು ಸಸ್ಯದಿಂದಲೂ ಮಾನವನಿಗೆ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲ ದೊರಕಿದೆ. ಅವುಗಳ ಮಹತ್ವವನ್ನು ನಾವು ಅರಿಯಲು ಹಿಂದೆ ಬಿದ್ದಿದೇವೆಂದರು.
ಮಾನವನು ಶಕ್ತಿಶಾಲಿ ಜೀವಿ ಎಂಬುದು ಸತ್ಯವಾದರೂ ಆತನಿಗಿಂತ ಶಕ್ತಿಶಾಲಿಯಾದ ಸಸ್ಯಗಳನ್ನು ಕಾಣಬಹುದಾಗಿದೆ ಎಂದರು.
ಆಯುರ್ವೇದ, ಯುನಾನಿ, ಮತ್ತು ಸಿದ್ಧ ವೈದ್ಯ ಪದ್ಧತಿಯಲ್ಲಿ ಔಷಧೀಯ ಗುಣವುಳ್ಳ ಸಸ್ಯಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಔಷಧೀಯ ಸಸ್ಯಗಳನ್ನೇ ಈ ಮೂರು ಪದ್ಧತಿಗಳು ಅವಲಂಭಿಸಿವೆ ಎಂದು ವಿವರಿಸಿದರು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಹಲವು ಔಷಧೀಯ ಮೂಲವುಳ್ಳ ಸಸ್ಯಗಳನ್ನು ಕಾಣಬಹುದಾಗಿದೆ. ಅವುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದ ಅವರು, ಔಷಧೀಯ ಸಸ್ಯಗಳ ಮಹತ್ವವನ್ನು ತಿಳಿಸಿಕೊಟ್ಟರು.
ಲಕ್ಷಗಟ್ಟಲೆ ಔಷಧೀಯ ಗುಣವುಳ್ಳ ಸಸ್ಯಗಳ ಇವೆ, ಭಾರತದಲ್ಲಿಯೇ 46 ಸಾವಿರಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ. ಜಗತ್ತಿನ ಔಷಧಿ ತಯಾರಿಕೆಗೆ ದೇಶದ ಅರುಣಾಚಲ ಪ್ರದೇಶ ಗಣನೀಯವಾಗಿ ಔಷಧೀಯ ಸಸ್ಯಗಳನ್ನು ಪೂರೈಕೆ ಮಾಡುತ್ತಿದ್ದು, ಪೂರೈಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ ಪಶ್ಚಿಮ ಘಟ್ಟ ಪ್ರದೇಶ ಎರಡನೇ ಸ್ಥಾನದಲ್ಲಿದೆ ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜಿ. ಶಕುಂತಲಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕುವೆಂಪು ವಿಶ್ವ ವಿದ್ಯಾಲಯದ ಕುಲಸಚಿವೆ ಪ್ರೊ. ಮಲ್ಲಿಕಾ ಘಂಟಿ, ಎಸ್.ಎಂ. ಬಿ.ಟಿ. ಆಯುರ್ದೇದ ಕಾಲೇಜಿನ ಪ್ರಾಧ್ಯಾಪಕ ಅಶೋಕ್ ವಾಲಿ, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಜಯದೇವಪ್ಪ, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಎಚ್.ಎಂ. ವಾಗ್ದೇವಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement