ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಆರ್‌ಎಂಎಸ್‌ಎಗೆ ಪೂರಕವಾಗಿ ಶಿಕ್ಷಕರ ಸಂಘಟನೆ ಅಗತ್ಯ'

Rashmi Kasaragodu
Updated On : 23 Apr 2014, 11:37 am

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.22
ಪ್ರೌಢಶಾಲಾ ಸಹ ಶಿಕ್ಷಕರನ್ನು ಕಿರಿಯ ಪ್ರೌಢಶಾಲಾ ಸಹ ಶಿಕ್ಷಕರು ಎಂಬುದಾಗಿಯೂ, ಪದವಿಪೂರ್ವ ಉಪನ್ಯಾಸಕರನ್ನು ಉನ್ನತ ಪ್ರೌಢಶಾಲಾ ಸಹ ಶಿಕ್ಷಕರು ಎಂದು ಪದನಾಮ ಮಾಡಿರುವುದರಿಂದ ಆರ್‌ಎಂಎಸ್‌ಎ ಪದ್ಧತಿಗೆ ಅನುಗುಣವಾಗಿ ಶಿಕ್ಷಕರ ಸಂಘಟನೆಯ ಅಗತ್ಯವಿದೆ. ಆದ್ದರಿಂದ ಸರ್ವರನ್ನೂ ಒಳಗೊಂಡ ರಾಜ್ಯಮಟ್ಟದ ಶಿಕ್ಷಕರ ನೂತನ ಸಂಘಟನೆಯನ್ನು ಸ್ಥಾಪಿಸಿರುವುದಾಗಿ ಶಿಕ್ಷಕರ ಸಂಘಟನೆ ಮಾಜಿ ಕಾರ್ಯದರ್ಶಿ ಕೆ.ಕೆ.ಮಂಜುನಾಥ ಕುಮಾರ್ ಹೇಳಿದರು.
ಅಲ್ಲದೇ, ರಾಜ್ಯದಲ್ಲಿ ಪ್ರೌಢಶಾಲಾ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಸರ್ಕಾರ ದೇಶದಲ್ಲಿ ಏಕರೂಪ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿರುವುದು ಸ್ವಾಗತಾರ್ಹ. ಜತೆಗೆ ಏಕರೂಪ ಸಮಾನ ವೇತನ ಸೌಲಭ್ಯವನ್ನೂ ನೀಡಬೇಕು. ಎಸ್ಸೆಸ್ಸೆಲ್ಸಿ ಹಾಗೂ ಪಿಯು ಉಪನ್ಯಾಸಕರ ಮೌಲ್ಯಮಾಪನ ಭತ್ಯೆಯಲ್ಲಿ ವ್ಯತ್ಯಾಸವಿದ್ದು, ಸರಿಪಡಿಸಬೇಕು. ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರ ಹುದ್ದೆಯನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು. ಈಗಾಗಲೇ ಸಮಯದ ಪರಭಾರೆಯಾಗಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧ್ಯಾಪಕರಿಗೆ ಮುಖ್ಯೋಪಾಧ್ಯಾಯರ ವೇತನ ನೀಡಬೇಕು.
70 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎಂಬ ಅನುಪಾತದಿಂದಾಗಿ ಇಲಾಖೆಯ ಸಿಸಿಇ ಪದ್ಧತಿ ನಡೆಸುವುದು ಕಷ್ಟಕರವಾಗಿದೆ. ಪೋಷಕರಿಗೆ ಹಾಗೂ ಶಿಕ್ಷಕರಿಗೆ ಅನಗತ್ಯ ಹೊರೆಯಾಗುತ್ತಿದೆ. ಆದ್ದರಿಂದ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಎಂಬ ಅನುಪಾತ ಜಾರಿಗೆ ತರಬೇಕು ಎಂದು ಮಂಜುನಾಥ್ ಒತ್ತಾಯಿಸಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ರಜಾದಿನಗಳಲ್ಲಿ ಮಾಡುವುದರಿದಂ ಒಟ್ಟು 30 ಗಳಿಕೆ ರಜಾವನ್ನು ಶಿಕ್ಷಕರಿಗೆ ನೀಡಬೇಕು.
 ಪ್ರೌಢಶಾಲಾ ಶಿಕ್ಷಕರಿಂದ ಮುಖ್ಯ ಶಿಕ್ಷಕರ, ಉಪನ್ಯಾಸಕರ ಹುದ್ದೆಗೆ, ಉಪನ್ಸಾಸಕರ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೆ ಪ್ರತಿವರ್ಷ ಭಡ್ತಿ ನೀಡಬೇಕು. ಅಕ್ಷರ ದಾಸೋಹ, ಕ್ಷೀರಭಾಗ್ಯ ಮುಂತಾದ ಯೋಜನೆಗಳ ಅನುಷ್ಠಾನದ ಹೊಣೆ ಶಿಕ್ಷಕರಿಗೆ ನೀಡಿದ್ದು, ಇದನ್ನು ವಾಪಸು ಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮಚಂದ್ರಪ್ಪ, ತಿಪ್ಪೇಸ್ವಾಮಿ, ಲಕ್ಷ್ಮಣ್ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement