ಪಿಡಬ್ಲ್ಯುಡಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಇಂದು
ಕ.ಪ್ರ.ವಾರ್ತೆ ದಾವಣಗೆರೆ ಏ. 22
ರಾಜ್ಯ ಸರ್ಕಾರದ ಮರಳು ನೀತಿಯಿಂದಾಗಿ ಜನಸಾಮಾನ್ಯರು ಕಟ್ಟಡ ಕಟ್ಟಲು ಮರಳು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದು, ಸಮರ್ಪಕ ಮರಳು ಪೂರೈಕೆಗೆ ಒತ್ತಾಯಿಸಿ ಏ.23 ರಂದು ಬೆಳಗ್ಗೆ 11 ಗಂಟೆಗೆ ಹೊನ್ನಾಳಿ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ ಜಡಿಯುವುದಾಗಿ ಮಾಜಿ ಸಚಿವ, ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮರಳು ನೀತಿಯಿಂದಾಗಿ ಜನ ಸಾಮಾನ್ಯರು ಮನೆ, ಕಟ್ಟಡವನ್ನೇ ಕಟ್ಟಲಾಗುತ್ತಿಲ್ಲ. ಮರಳು ಇಲ್ಲದ್ದರಿಂದ ಸಿಮೆಂಟ್ ರಸ್ತೆ, ಸೇತುವೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೂ ಸಾಕಷ್ಟು ಹಿನ್ನಡೆ ಆಗಿದೆ ಎಂದರು.
ಹೋರಾಟದ ಎಚ್ಚರಿಕೆ: ಕಾನೂನಿನ್ವಯ ಮರಳು ಸಾಗಣೆಗೆ ರಾಜಧನ ಕಟ್ಟಿಸಿಕೊಂಡು, ಮರಳು ಸಾಗಿಸಲು ಸರ್ಕಾರ ಅನುಮತಿ ನೀಡಬೇಕು. ಕಳೆದ ಒಂದು ತಿಂಗಳಿನಿಂದಲೂ ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಮರಳು ಸಾಗಾಣಿಕೆ ತಡೆ ಹಿಡಿಯಲಾಗಿದೆ. ಮರಳು ಸಾಗಿಸುವ ಎತ್ತಿನ ಬಂಡಿ, ಟ್ರ್ಯಾಕ್ಟರ್ ಸೇರಿದಂತೆ ವಾಹನಗಳಿಗೆ 25000 ದಂಡ ವಿಧಿಸಲಾಗುತ್ತಿದೆ. ಏ.23ರ ಒಳಗಾಗಿ ಜಿಲ್ಲಾ ಆಡಳಿತ ಸ್ಪಂದಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಆಗ್ರಹ: ಬಸವ ವಸತಿ, ವಾಂಬೇ, ಇಂದಿರಾ ಆವಾಸ್ ಸೇರಿದಂತೆ ಯಾವುದೇ ವಸತಿ ಯೋಜನೆಗಳಡಿ ಮನೆ ನಿರ್ಮಾಣ, ಅಭಿವೃದ್ಧಿ ಕಾರ್ಯ, ಮನೆ, ಕಟ್ಟಡಗಳ ನಿರ್ಮಾಣ, ರಸ್ತೆ ನಿರ್ಮಾಣಕ್ಕೂ ಸಹ ಮರಳು ಸಿಗುತ್ತಿಲ್ಲ. ಅಲ್ಲದೇ, ಒಂದಕ್ಕೆ 3 ಪಟ್ಟು ಹೆಚ್ಚಿನ ದರಕ್ಕೆ ಮರಳನ್ನು ಅಕ್ರಮವಾಗಿ ಮಾರಾಟ ಮಾಡಿಕೊಳ್ಳುವ ದಂಧೆ ಜೋರಾಗಿ ಸಾಗುತ್ತಿದೆ. ಮರಳು ನೀತಿಯನ್ನು ಪಾಲಿಸಿ ಮಾಡ ದಿರುವ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ, ಸಮರ್ಪಕವಾಗಿ ಮರಳು ಸಿಗುವಂತೆ ಮಾಡಲಿ ಎಂದು ಆಗ್ರಹಿಸಿದರು.
ತಕ್ಷಣದಿಂದಲೇ ಸರ್ಕಾರ ಮರಳುಗಾರಿಕೆಗೆ ಪರ್ಮಿಟ್ ನೀಡಬೇಕು. ಇನ್ನೇನು ಮಳೆಗಾಲ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣವೇ ಮರಳು ಪೂರೈಸಲು ಜಿಲ್ಲಾಡಳಿತ, ಸರ್ಕಾರವು ಪ್ರಥಮಾದ್ಯತೆಯ ಮೇಲೆ ಮುಂದಾಗಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.
ರಾಜು ಹಿರೇಮಠ, ಬಸವರಾಜ, ರಂಗಪ್ಪ ಸಾಸ್ವೇಹಳ್ಳಿ, ಬಸವರಾಜಪ್ಪ, ಕೃಷ್ಣಪ್ಪ, ರಾಮಚಂದ್ರಪ್ಪ, ಬಸವರಾಜಪ್ಪ, ಸಾಸ್ವೇಹಳ್ಳಿ ರವಿ, ಮಹಾಂತೇಶ ಇತರರು ಇದ್ದರು.