ಬಿಜೆಪಿ ಸಂತಾಪ
ಶಿವಮೊಗ್ಗ: ಹಿರಿಯ ರಾಜಕಾರಣಿ, ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಧರ್ಮಪತ್ನಿ ಶಕುಂತಲಾ ಬಂಗಾರಪ್ಪ ಇವರ ನಿಧನಕ್ಕೆ ಜಿಲ್ಲಾ ಬಿಜೆಪಿ ಘಟಕವು ಸಂತಾಪ ವ್ಯಕ್ತಪಡಿಸಿದ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸತ್ ಸದಸ್ಯ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಪಿ.ವಿ.ಕೃಷ್ಣಭಟ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಆರ್.ಕೆ.ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್, ಭಾರತಿ ಶೆಟ್ಟಿ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬೇಳೂರು ಗೋಪಾಲಕೃಷ್ಣ, ರಾಜ್ಯ ಬಿಜೆಪಿ ಮುಖಂಡರಾದ ಗಿರೀಶ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ನಗರ ಬಿಜೆಪಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ಜಿಲ್ಲಾ ಮುಖಂಡರಾದ ರುದ್ರೇಗೌಡರು, ಎಸ್.ಎಸ್. ಜ್ಯೋತಿಪ್ರಕಾಶ್, ಕೆ.ಪಿ.ಪುರುಷೋತ್ತಮ ಹಾಗೂ ಬಿಜೆಪಿ ಎಲ್ಲಾ ಸ್ಥರದ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಪ್ರಸನ್ನಕುಮಾರ್ ಶೋಕ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಧರ್ಮಪತ್ನಿ ಶಕುಂತಲಾ ಬಂಗಾರಪ್ಪ ಅವರ ನಿಧನಕ್ಕೆ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಸಂತಾಪ ಸೂಚಿಸಿದ್ದಾರೆ. ಸಹೃದಯಿಗಳಾಗಿದ್ದ ಶಕುಂತಲಾ ಬಂಗಾರಪ್ಪ ಅವರು, ಎಲ್ಲರ ಒಳಿತನ್ನು ಬಯಸುತ್ತಿದ್ದರು ಎಂದು ಅವರು ಶೋಕಿಸಿದ್ದಾರೆ.
ಗಣ್ಯರ ಕಂಬನಿ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿ, ಇವರು ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ಶಕುಂತಲಾ ಬಂಗಾರಪ್ಪ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಮಕ್ಕಳಿಗೂ, ಮೊಮ್ಮಕ್ಕಳಿಗೂ, ಕುಟುಂಬ ವರ್ಗದವರಿಗೂ, ಅಭಿಮಾನಿಗಳಿಗೂ ದಯಪಾಲಿಸಲಿ ಎಂದಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ, ಶಕುಂತಲಾ ಬಂಗಾರಪ್ಪ ಅವರು ಅತ್ಯಂತ ಸ್ನೇಹಮಯಿ ವ್ಯಕ್ತಿತ್ವ ಹೊಂದಿದ್ದರು ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ತಮ್ಮ ವಿಶಿಷ್ಟ ಕಾರ್ಯಕ್ರಮಗಳು ಮತ್ತು ಜನಪರ ಹೋರಾಟಗಳಿಂದ ಜನರ ಮನಸ್ಸಿನಲ್ಲಿ ಉಳಿದಿರುವ ಎಸ್. ಬಂಗಾರಪ್ಪ ಅವರ ಯಶಸ್ಸಿನ ಹಿಂದೆ ನೆರಳಾಗಿ ನಿಂತವರು ಶಕುಂತಲಾ ಬಂಗಾರಪ್ಪ. ಬಂಗಾರಪ್ಪ ಕುಟುಂಬದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿ, ಅವರ ಜನಪರ ಹೋರಾಟಗಳಿಗೆ ಜೊತೆಯಾಗಿ ನಿಂತವರು. ಇವರ ಸಾವು ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಅಘಾತ ತಂದಿದೆ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಮಂಜುನಾಥ ಭಂಡಾರಿ, ಶಕುಂತಲಾ ಬಂಗಾರಪ್ಪ ಅವರ ನಿಧನದಿಂದ ಜಿಲ್ಲೆಯ ಜನತೆಗೆ ತೀವ್ರ ದುಃಖವಾಗಿದೆ. ಇವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ ನೀಡಲಿ, ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.