ವಿಜೃಂಭಣೆಯ ಬಸವೇಶ್ವರ ರಥೋತ್ಸವ
ಶಿರಾಳಕೊಪ್ಪ: ಇಲ್ಲಿಗೆ ಸಮೀಪದ ನೇರಲಗಿ ವೀರಭದ್ರ ದೇವರ ಶರಬಿ ಗುಗ್ಗಳ ಹಾಗೂ ಬಸವೇಶ್ವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಕೆಳದಿ ಅರಸರ ಕಾಲದಲ್ಲಿ ಪ್ರತಿಷ್ಠಾಪಿತವಾಗಿರುವ ನೇರಲಗಿ ವೀರಭದ್ರೇಶ್ವರ ಜಾತ್ರೆ ಹಲವು ವಿಶಿಷ್ಟತೆ ಹೊಂದಿದ್ದು, ಈ ಜಾತ್ರೆ ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗಿರದೇ ಹಲವು ಜನಾಂಗದವರು ಭಕ್ತಿ ಶ್ರದ್ಧೆಯಿಂದ ವೀರಭದ್ರ ದೇವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವುದು ವಿಷೇಷವಾಗಿದೆ.
ಬೋವಿ ಜನಾಂಗದವರು ತಮ್ಮ ಆರಾಧ್ಯ ದೈವವೆಂದು ಈ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ತಮ್ಮ ಹರಕೆ ಸಲ್ಲಿಸುವದರಜೊತೆಗೆ ಮದುವೆ ಹಾಗೂ ಇತರ ಕಾರ್ಯಕ್ರಮ ಆಚರಿಸುತ್ತಾರೆ. ಮಂಗಳವಾರ ನಡೆದ ಗುಗ್ಗಳ ಕಾರ್ಯಕ್ರಮ ಬೆಲವಂತನಕೊಪ್ಪ ಹಾಗೂ ನೇರಲಗಿ ಗ್ರಾಮಗಳಲ್ಲಿ ನಡೆದು ಕೊನೆಯಲ್ಲಿ ಗುಗ್ಗಳ ವೀರಭದ್ರನ ಸನ್ನಿಧಿಯಲ್ಲಿ ಕೊನೆಗೊಂಡ ನಂತರ ಬಸವೇಶ್ವರ ರಥೋತ್ಸವ ನಡೆಯಿತು. ಈ ಜಾತ್ರೆಯನ್ನು ಶಿರಾಳಕೊಪ್ಪ ಭಾಗದ ಕೊನೆ ಜಾತ್ರೆ ಎಂದು ಕರೆಯಲಾಗುತ್ತಿದೆ. ಸಂಜೆನಡೆದ ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಸಾವಿರಾರು ಭಕ್ತರಿಗೆ ಪ್ರತಿವರ್ಷದಂತೆ ಈ ಬಾರಿಯೂ ಅನ್ನ ಸಂತರ್ಪಣೆ ನಡೆಯಿತು.