ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಬಂಗಾರಧಾಮ'ದಲ್ಲಿ ಶಕುಂತಲಾ ಲೀನ

Vishwanath S
Updated On : 24 Apr 2014, 11:19 am

ಕ.ಪ್ರ. ವಾರ್ತೆ, ಸೊರಬ, ಏ.23
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರಧಾಮದಲ್ಲಿ ಮಧು ಬಂಗಾರಪ್ಪ ಅವರು ಬುಧವಾರ ಸಂಜೆ ಸರಿಯಾಗಿ 4 ಗಂಟೆ 10 ನಿಮಿಷಕ್ಕೆ ಅಗ್ನಿಸ್ಪರ್ಶ ಮಾಡುವುದರೊಂದಿಗೆ ಸಾರೇಕೊಪ್ಪ ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಪಾರ್ಥಿವ ಶರೀರವು ಪಂಚಭೂತಗಳಲ್ಲಿ ಲೀನವಾಯಿತು. ಇದರೊಂದಿಗೆ ಮತ್ಯಾವ ಅವಘಡ ಸಂಭವಿಸುವುದೋ ಎಂಬ ಆತಂಕವೂ ಸಹ ಕರಗಿತು.
ಕಿರಿಯ ಪುತ್ರ ಮಧು ಬಂಗಾರಪ್ಪ ಅವರು ಅಗ್ನಿಸ್ಪರ್ಶ ಮಾಡುವ ಕ್ಷಣದಲ್ಲಿಯೇ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರು ಕರ್ಪೂರವನ್ನು ಚಿತೆಯ ಮೇಲೆ ಹತ್ತಿಸಿ ಇಡುವ ಮೂಲಕ ತಮ್ಮ ಕರ್ತವ್ಯವನ್ನೂ ಮಾಡಿದರು. ಆರ್ಶೆಯ ವಿಧಿವಿಧಾನದ ಅಂತ್ಯಸಂಸ್ಕಾರದ ನೇತೃತ್ವವನ್ನು ಪಟ್ಟಣದ ವಿದ್ವಾನ್ ನಾರಾಯಣ ಭಟ್ ಸಂಗಡಿಗರು ವಹಿಸಿದ್ದರು. ಯಾರು ಅಗ್ನಿಸ್ಪರ್ಶ ಮಾಡುವವರೆಂಬ ಕುತೂಹಲಕ್ಕೆ ಇದರೊಂದಿಗೆ ತೆರೆ ಬಿದ್ದಿತು.
ಬೆಳಗ್ಗೆ ಕುಬಟೂರು ಗ್ರಾಮದಲ್ಲಿ ಶಕುಂತಲಮ್ಮ ಅವರ ಪಾರ್ಥಿವ ಶರೀರದ ದರ್ಶನ ಪಡೆಯಲು ಕುಮಾರ್ ಬಂಗಾರಪ್ಪ ಅವರು ಆಗಮಿಸಿದ ಸಂದರ್ಭದಲ್ಲಿ ಆದ ಕೆಲವು ನಿಮಿಷಗಳ ತಳ್ಳಾಟ ಹೊರತುಪಡಿಸಿದರೆ ಇಡೀ ಪ್ರಕ್ರಿಯೆ ಶಾಂತಿಯುತವಾಗಿಯೇ ನಡೆಯಿತು.
ಸ್ವಲ್ಪ ಗೊಂದಲ: ಕುಬಟೂರಿನಲ್ಲಿ ಅಂತಿಮ ವಿಧಿವಿಧಾನ ಆರಂಭಿಸುವ ಮೊದಲು ಕುಮಾರ್ ಬಂಗಾರಪ್ಪನವರ ಆಗಮನಕ್ಕೆ ಕಾಯಲಾಯಿತು. ಕುಮಾರ್ ಬಂಗಾರಪ್ಪ ಆಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ಮಧು ಬಂಗಾರಪ್ಪ ಕದಲದೇ ನಿಂತಿದ್ದರು. ಅವರ ಹಿಂದೆಯೇ ಬಂಗಾರಪ್ಪನವರ ಅಕ್ಕನ ಮಗ ಪಾಲಾಕ್ಷಪ್ಪ ಹಾಗೂ ಕುಟುಂಬದವರು ಆಗಮಿಸುತ್ತಿದ್ದಂತೆಯೇ ಅವರು ಹಾಗೂ ಸಂಬಂಧಿಗಳ ನಡುವೆ ವಾಗ್ವಾದ ಆರಂಭಗೊಂಡು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿತು. ಕುಮಾರ್ ಮತ್ತು ಮಧು ಪರಸ್ಪರ ತಮ್ಮ ಬೆಂಬಲಿಗರನ್ನು ಶಾಂತಗೊಳಿಸಲು ಪ್ರಯತ್ನಿಸಿದರು.
ಪೊಲೀಸರು ಕೂಡ ಮಧ್ಯ ಪ್ರವೇಶಿಸಿ, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಶಿವರಾಜ್ ಕುಮಾರ್ ಅವರ ಮಧ್ಯಸ್ಥಿತಿಕೆಯಿಂದ ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಮುಂದಾದರು. ಪರಿಸ್ಥಿತಿ ತಿಳಿಗೊಂಡ ನಂತರ ಕುಮಾರ್ ಮತ್ತು ಮಧು ಒಟ್ಟಾಗಿಯೇ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು. ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಪಯಣವಿದು: ಶಕುಂತಲಮ್ಮ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗಿನ ಜಾವ 5.40 ಸುಮಾರಿಗೆ ಸ್ವಗ್ರಾಮ ಕುಬಟೂರಿಗೆ ಕರೆತರಲಾಯಿತು. ಕುಬಟೂರಿನ ಬಂಗಾರ ನಿವಾಸದ ಎದುರು ನೂರಾರು ಮಹಿಳೆಯರು ಸೇರಿದಂತೆ ಬಂಧು, ಆಪ್ತೇಷ್ಟರು ನೆರೆದಿದ್ದರು. ಇಲ್ಲಿಯೇ ಧಾರ್ಮಿಕ ವಿಧಿ ವಿಧಾನ ನಡೆಯಿತು. ನಂತರ ಮುಕ್ತಿ ವಾಹಿನಿಯಲ್ಲಿ ಪಾರ್ಥಿವ ಶರೀರದೊಂದಿಗೆ ಕುಮಾರ್, ಮಧು, ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಸಂಬಂಧಿಗಳು ಸೊರಬದ ಬಂಗಾರಧಾಮದತ್ತ ಪ್ರಯಾಣ ಬೆಳೆಸಿದರು.
ಸಾರ್ವಜನಿಕ ದರ್ಶನ: ಮಧ್ಯಾಹ್ನ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಅವಕಾಶ ಮಾಡಿಕೊಡಲಗಿತ್ತು. ಈ ಸಂದರ್ಭದಲ್ಲಿ ಮಧು, ಕುಮಾರ್, ಎರಡೂ ಕುಟುಂಬ ವರ್ಗದವರು ಪಾರ್ಥೀವ ಶರೀದರ ಪಕ್ಕದಲ್ಲಿಯೇ ನಿಂತು ಯಾವುದೇ ಅಹಿತಕ ಘಟನೆಗೆ ಅವಕಾಶ ನೀಡಲಿಲ್ಲ.
ಅಂತಿಮ ದರ್ಶನಕ್ಕೆ ವಿಧಾನ ಸಭಾ ಸ್ವೀಕರ್ ಕಾಗೋಡು ತಿಮ್ಮಪ್ಪ, ಸೋಲೂರು ಮಠದ ರೇಣುಕಾನಂದ ಸ್ವಾಮೀಜಿ, ನಂದಿಗುಡಿ ಶ್ರೀಗಳು, ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ, ಚಿತ್ರ ನಿರ್ಮಾಪಕ ಚಿನ್ನೇಗೌಡ, ಮೈಸೂರು ಗೋವಿಂದರಾಜ್, ಕಾರವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಶಕುಂತಲಮ್ಮ ಸಹೋದರ ಭೀಮಣ್ಣ ನಾಯ್ಕ್, ಭದ್ರಾವತಿ ಶಾಸಕ ಅಪ್ಪಾಜಿಗೌಡ, ಹರಿಹರ ಶಾಸಕ ಶಿವಶಂಕರ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ಹಗರಿಬೊಮ್ಮನಹಳ್ಳಿ ಶಾಸಕ ಬಸವರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್, ಚಿತ್ರನಟ ಗುರುದತ್, ಬೆಂಗಳೂರು ಶಕೀಲ್ ಅಹ್ಮದ್, ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ನಾಯ್ಕ್. ಹೊಸನಗರ ಮಾಜಿ ಶಾಸಕ ಬಿ. ಸ್ವಾಮಿರಾವ್, ಜೆ.ಡಿ. ನಾರಾಯಣಪ್ಪ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ, ಮತ್ತಿತರರು ಆಗಮಿಸಿದ್ದರು.
ಬಂಗಾರಧಾಮದಲ್ಲಿರುವ ಬಂಗಾರಪ್ಪನವರ ಸಮಾಧಿಯ ಪಕ್ಕದಲ್ಲಿಯೇ ಶಕುಂತಲಮ್ಮನವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಂಜೆ 4-10ಕ್ಕೆ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಒಟ್ಟಿಗೆ ಅಗ್ನಿಸ್ಪರ್ಶ ಮಾಡಿದರು.
ಅಂತಿಮ ಯಾತ್ರೆ
ಬೆ.5.40ಕುಬಟೂರಿಗೆ ಪಾರ್ಥಿವ ಶರೀರ ಆಗಮನ
ಬೆಳಗ್ಗೆ 10ಅಂತಿಮ ಧಾರ್ಮಿಕ ವಿಧಿ ಆರಂಭ
ಬೆಳಗ್ಗೆ 11.30 ಸೊರಬದ ಬಂಗಾರಧಾಮದತ್ತ ಪಯಣ ಆರಂಭ
ಮಧ್ಯಾಹ್ನ 12.30 ಕ್ರೀಡಾಂಗಣದಲ್ಲಿ ಅಂತಿಮ ದರ್ಶನ ಆರಂಭ
ಮಧ್ಯಾಹ್ನ 3.25  ಬಂಗಾರಧಾಮಕ್ಕೆ ಪಾರ್ಥಿವ ಶರೀರ ಆಗಮನ
ಸಂಜೆ 4.10ಮಧು ಹಾಗೂ ಕುಮಾರ್ ಅವರಿಂದ ಅಗ್ನಿಸ್ಪರ್ಶ
ದ್ವೇಷ ಬಿಟ್ಟು ಮನಸಾಕ್ಷಿ ಮಾತು ಕೇಳಿ
ಶಿವಮೊಗ್ಗ: ಕಳೆದ ಚುನಾವಣೆಯಲ್ಲಿ ತಂದೆಯನ್ನು ಕಳೆದುಕೊಂಡೆವು. ಈ ಬಾರಿಯ ಚುನಾವಣೆಯಲ್ಲಿ ತಾಯಿಯನ್ನು ಕಳೆದುಕೊಂಡೆವು. ಚುನಾವಣೆಗಾಗಿಯೇ ತಂದೆತಾಯಿಯನ್ನು ಸೀಮಿತಗೊಳಿಸಿದ್ದು ಅಕ್ಷಮ್ಯ ಅಪರಾಧ ಎಂದು ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಕಣ್ಣೀರಿಟ್ಟರು.
ಅಂತ್ಯ ಸಂಸ್ಕಾರದ ನಂತರ ತಮ್ಮ ಭಾವನೆ ಹಂಚಿಕೊಂಡ ಅವರು, ಈಗಲಾದರೂ ದ್ವೇಷವನ್ನು ಬಿಡಿ. ಮನಸಾಕ್ಷಿಯ ಮಾತು ಕೇಳಿ ಎಂದರು. ರಾಜಕೀಯಕ್ಕೋಸ್ಕರವೇ ಬದುಕಿದ್ದೇವೆಂಬಂತೆ ಮಾತನಾಡುತ್ತಿದ್ದಾರೆ. ಸಾವಿನ ಮನೆಯಲ್ಲೂ ರಾಜಕಾರಣ ಮಾಡಿದರು ಎಂದು ವಿಷಾಧಿಸಿದ ಅವರು, ಸಂಬಂಧದಲ್ಲಿ ವೈರತ್ವವನ್ನ ಬಿಟ್ಟು ಒಂದಾಗಬೇಕು. ದೊಡ್ಡ ಸಾಹೇಬರೇ ಇವರನ್ನ ತಿದ್ದಲು ಪ್ರಯತ್ನ ಪಟ್ಟು ಬಿಟ್ಟುಬಿಟ್ಟರು. ನಮ್ಮ ಮನಸಾಕ್ಷಿಗೆ ಮನ್ನಣೆ ಕೊಡಬೇಕು ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಕುಟುಂಬದಲ್ಲಿ ಆದಷ್ಟು ಬೇಗ ಒಳ್ಳೆಯದಾಗುತ್ತೆ, ಇನ್ನೂ ಮುಂದಾದ್ರು ತಪ್ಪನ್ನು ತಿದ್ದಿಕೊಳ್ಳಬೇಕು ಈಗಲಾದರೂ ದ್ವೇಷವನ್ನು ಬಿಟ್ಟು ಒಂದಾಗಬೇಕು. ದೇವರು ಮಧುಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ರಕ್ಷಣಾ ಬಿಗಿ ಬಂದೋಬಸ್ತಿನ ವ್ಯವಸ್ಥೆಗೊಳಿಸಲಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್ ಹಾಗೂ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಬಿ. ದಯಾಳ್ ನೇತೃತ್ವದಲ್ಲಿ 4 ಡಿಎಸ್‌ಪಿ, 6 ವೃತ್ತ ನಿರೀಕ್ಷಕರು, 15 ಪಿಎಸ್‌ಐ, 19 ಎಐಎಸ್‌ಐ 160 ಪೊಲೀಸ್ ಪೇದೆ, 60 ರಿಸರ್ವ್ ಪೊಲೀಸ್ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ, 30 ಗೃಹ ರಕ್ಷಕ ದಳ ಸಿಬ್ಬಂದಿ ರಕ್ಷಣಾ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದರು.
ಕುಬಟೂರಿನಲ್ಲಿ ಕೆಲವೇ ನಿಮಿಷಗಳ ಕಾಲ ನಡೆದ ತಳ್ಳಾಟವನ್ನು ದೃಶ್ಯ ಮಾಧ್ಯಮಗಳು ಬೆಳಗಿನಿಂದ ನಿರಂತರವಾಗಿ ಪ್ರಸಾರ ಮಾಡಿದ್ದರಿಂದಲೋ ಏನೋ ಅಂತ್ಯಕ್ರಿಯೆ ವೇಳೆ ಗಲಭೆ ನಡೆಯಬಹುದೆಂಬ ಆತಂಕದಿಂದ ಸಾರ್ವಜನಿಕರು, ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರಲಿಲ್ಲ. ಇದರಿಂದಾಗಿ 'ಬಂಗಾರಧಾಮ'ದಲ್ಲಿ ಸಂಜೆ ವೇಳೆಯಲ್ಲಿ ನಡೆದ ಶಕುಂತಲಮ್ಮನವರ ಅಂತ್ಯಕ್ರಿಯೆ ಸಮಯಕ್ಕೆ ಜನರ ಪ್ರಮಾಣ ಕಡಿಮೆ ಇದ್ದು, ಎಲ್ಲಿ ನೋಡಿದರೂ ರಕ್ಷಣೆಗಾಗಿ ಬಂದ ಪೊಲೀಸರೇ ಕಾಣುತ್ತಿದ್ದರು.
ಜನಸಾಮಾನ್ಯರ ಆದರಕ್ಕೆ ಪಾತ್ರರಾಗಿದ್ದ ಬಂಗಾರಪ್ಪ
ಸೊರಬ: ದೂರದ ಬೆಂಗಳೂರಿಗೆ ಎಸ್.ಬಂಗಾರಪ್ಪ ಅವರನ್ನು ಕಾಣಲು ಹೋಗುವ ತಾಲೂಕಿನ ಜನತೆಯನ್ನು ಅವರು ಆತ್ಮೀಯವಾಗಿ ಬರಮಾಡಿಕೊಂಡು ಉಪಚರಿಸುತ್ತಿದ್ದರು. ಅವರ ಋಣ ನಮ್ಮ ಮೇಲಿದೆ. ಬಂಗಾರಪ್ಪ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಜೀವನದ ಒಡನಾಡಿಯಾಗಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮಂಜುನಾಥ ತಿಳಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಎಸ್.ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ವಿವಿಧ ಸಂಘ-ಸಂಸ್ಥೆ ವತಿಯಿಂದ ನಿಧನರಾದ ಶಕುಂತಲಾ ಬಂಗಾರಪ್ಪ ಅವರ ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ನಿಧನದ ನಂತರ ತಾಲೂಕಿಗೆ ಸಮರ್ಥ ನಾಯಕತ್ವ ಸಿಗಲೇ ಇಲ್ಲ. ಮುಂದಿನ ದಿನಗಳಲ್ಲಾದರೂ ಶಕುಂತಲಾ ಬಂಗಾರಪ್ಪ ಅವರ ಆಶಯದಂತೆ ಅವರ ಕುಟುಂಬ ಒಂದಾಗಿ ತಾಲೂಕನ್ನು ಮುನ್ನೆಡೆಸಲಿ ಎಂದರು.
ಸಂತಾಪ ಸೂಚಕ ಸಭೆಯಲ್ಲಿ ಪಾಣಿ ರಾಜಪ್ಪ, ಚಿಕ್ಕಾವಲಿ ನಾಗರಾಜಗೌಡ, ಪ್ರಭಾಕರ ರಾಯ್ಕರ್, ವಕೀಲ ನಾಗಪ್ಪ, ಇಂದೂಧರ ಒಡೆಯರ್, ಸುಬ್ರಹ್ಮಣ್ಯ ಗುಡಿಗಾರ್, ಶಿವಾನಂದ ಪಾಣಿ, ನಾಗರಾಜ, ಯುವ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬ್, ಅಹ್ಮದ್ ಷರೀಷ್ ಮತ್ತಿತರರು ಹಾಜರಿದ್ದರು.
'ಶಕುಂತಲಾ ವ್ಯಕ್ತಿತ್ವ ಮಹಿಳೆಯರಿಗೆ ಮಾದರಿ'
ಸೊರಬ: ಕಳೆದ 2 ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರನ್ನು ಕಳೆದುಕೊಂಡು ಅನಾಥವಾಗಿದ್ದ ತಾಲೂಕನ್ನು ಶಕುಂತಲಾ ಬಂಗಾರಪ್ಪ ಅವರು ಚೈತನ್ಯ ಮೂಡಿಸುವ ಹೊತ್ತಿಗೆ ಆದ ಅವರ ನಿಧನ ಆಘಾತ ತಂದಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಂಚಿ ಹನುಮಂತಪ್ಪ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಪಂ ವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್.ಬಂಗಾರಪ್ಪ ಅವರ ರಾಜಕೀಯ ಏರಿಳಿತಗಳಿಗೆ ಆತ್ಮಸ್ಥೈರ್ಯ ತುಂಬಿ ಕುಟುಂಬದ ಹೆಣ್ಣಾಗಿ, ಪತಿಯ ಕಣ್ಣಾಗಿದ್ದವರು ಶಕುಂತಲಾ ಬಂಗಾರಪ್ಪ, ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು ಆದರ್ಶ ತಾಯಿ ಆಗಿದ್ದ ಅವರ ವ್ಯಕ್ತಿತ್ವ ಪ್ರತಿಯೊಬ್ಬ ಸ್ತ್ರೀಯರಿಗೂ ಮಾದರಿ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಡಿ.ಆರ್.ಶ್ರೀಧರ ಮಾತನಾಡಿ, ದಿ. ಎಸ್.ಬಂಗಾರಪ್ಪ ಅವರ ಕುಟುಂಬ ತಾಲೂಕಿನ ಜನತೆಯ ಮೇಲೆ ಅಪಾರವಾದ ನಂಬಿಕೆ ಮತ್ತು ವಿಶ್ವಾಸ ಹೊಂದಿದ್ದರು. ಅವರ ಕೊನೆಯ ಕಾಲ ಘಟ್ಟದಲ್ಲಿ ಸೊರಬದಲ್ಲಿ ನಡೆದ ಸಭೆಯೆ ಕೊನೆಯದ್ದಾಗಿತ್ತು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ ಮಾತನಾಡಿ, ಲೋಕಸಭಾ ಚುನಾವಣೆಯ ನಿಮಿತ್ತ ತಾಲೂಕಿನಲ್ಲಿ ಪ್ರಚಾರ ನಡೆಸಿದ್ದರು. ಅವರಿಗೆ ಇಷ್ಟು ಬೇಗ ಸಾವು ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದರು.
ಪಪಂ ಉಪಾದ್ಯಕ್ಷೆ ನೇತ್ರಾವತಿ, ಸದಸ್ಯರಾದ ಸುಜಾಯತ್ ವುಲ್ಲಾ, ರತ್ನಮ್ಮ ನಾಗಪ್ಪ, ಶ್ರೀರಂಜಿನಿ, ಮೆಹಬೂಬಿ, ಪಪಂ ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ಷಹರಿ ರೋಜ್ಗಾರ್ ಯೋಜನೆಯ ರಮೇಶ್, ಕಿರಿಯ ಅಭಿಯಂತರ ಶೆಲ್ಜಾ, ಸಿಬ್ಬಂದಿಗಳಾದ ಪ್ರಭು, ಮಂಜುನಾಥ, ನಾಗರಾಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement