ಅಂಬೇಡ್ಕರ್ ಆದರ್ಶ ಪಾಲಿಸಿ
ಹೊಸನಗರ: ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಜೀವನದ ತತ್ವ- ಆದರ್ಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕೆಪಿಸಿ ಹೈಡಲ್ ಕಾರ್ಯನಿರ್ವಾಹಕ ನಿರ್ದೇಶಕ ಎನ್. ರಾಮಯ್ಯ ಹೇಳಿದರು.
ಹೊಸಂಗಡಿಯ ಕೆಪಿಸಿ ಎನರ್ಜಿ ಕ್ಲಬ್ನಲ್ಲಿ ಕೆಪಿಸಿ ಮತ್ತು ಕೆಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 123ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದಲ್ಲಿರುವ ಸಾಮಾಜಿಕ ಅಸಮಾನತೆ ಹೋಗಲಾಡಿಸಿ ಮತ್ತು ಅಸ್ಪೃಶ್ಯತೆ ನಿವಾರಿಸಲು ಸ್ವಾತಂತ್ರ್ಯಪೂರ್ವ ಮತ್ತು ನಂತರ ನಿರಂತರ ಹೋರಾಟ ನಡೆಸಿ ದೀನ- ದಲಿತರು ಹಿಂದುಳಿದವರು ಸಮಾಜದಲ್ಲಿ ನೆಮ್ಮದಿಯ ಬದುಕು ನಡೆಸುವಂತೆ ಮಾಡಿದ ಧೀಮಂತ ನಾಯಕರಾಗಿದ್ದರು ಎಂದರು.
ನಾವೆಲ್ಲರೂ ಅವರ ತತ್ವ- ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸರ್ವರೂ ಸಮಾನತೆಯಿಂದ ಜೀವಿಸುವಂತೆ ನೋಡಿಕೊಳ್ಳಬೇಕೆಂದರು.
ಮುಖ್ಯ ಉಪನ್ಯಾಸ ನೀಡಿದ ಸಾಹಿತಿ ಮುನಿಯಾಲ್ ಗಣೇಶ್ ಶೆಣೈ, ಅಂಬೇಡ್ಕರ್ ಅವರು ದೀನ- ದಲಿತರ ಏಳಿಗೆಗಾಗಿ ಮಾಡಿದ ಹೋರಾಟಗಳ ಬಗ್ಗೆ ಹಾಗೂ ಅವರು ಬೌದ್ಧ ಧರ್ಮ ಸ್ವೀಕರಿಸಿದ ಕುರಿತು ಮತ್ತು ಭೌದ್ಧ ಧರ್ಮದ ತತ್ವಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಕೆಪಿಸಿ ಹೊಸಂಗಡಿ ವಿಭಾಗದ ಮುಖ್ಯ ಅಭಿಯಂತರ ಕೆ. ಕಮಲಾಕ್ಷ, ವೈದ್ಯಕೀಯ ಅಧೀಕ್ಷಕ ಡಾ. ವಿಜಯಲಕ್ಷ್ಮೀ ನಾಯಕ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಅಧ್ಯಕ್ಷ ಆರ್. ಅಣ್ಣಯ್ಯ ಅಂಬೇಡ್ಕರ್ ಅವರ ಜೀವನ ಹೋರಾಟ, ಭಾರತದ ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಕುರಿತು ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಸ್ಥಾಪಕ ಸದಸ್ಯರಾದ ಗಂಗಾಧರ, ಎಚ್.ಪಿ. ಸ್ವಾಮಿ, ಜಿ. ಸೀತಾರಾಮಪ್ಪ, ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿದ ಎನ್. ರಾಮಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಅಂಕಿತಾ ಮತ್ತು ಅಶ್ವಿನಿ ಪ್ರಾರ್ಥಿಸಿದರು. ಹರೀಶ್ ಎಂ., ಸ್ವಾಗತಿಸಿದರು. ಆಲ್ಪೊನ್ಸ್ ಡೊಮೆಲ್ಲೊ ನಿರೂಪಿಸಿದರು. ಚನ್ನಕೇಶವ ವಂದಿಸಿದರು.