ಹಳದಮ್ಮ ಜಾತ್ರೆ ಪ್ರಯುಕ್ತ ಸಿಡಿ ಉತ್ಸವ
ಕ.ಪ್ರ.ವಾರ್ತೆ, ಭದ್ರಾವತಿ, ಏ.24
ಪಟ್ಟಣದ ಇತಿಹಾಸ ಪ್ರಸಿದ್ಧ ಹಳದಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ಮೂರನೆಯ ದಿನದ ಅಂಗವಾಗಿ ದೇವಾಲಯದ ಮುಂಭಾಗದಲ್ಲಿ ಸಿಡಿ ಉತ್ಸವವನ್ನು ಗುರುವಾರ ಮುಂಜಾನೆ ನಡೆಸಲಾಯಿತು.
ಹರಕೆ ಹೊತ್ತಿದ್ದ ಭಕ್ತರು ತಮ್ಮ ಮಕ್ಕಳನ್ನು ಹರಕೆಯ ತೊಟ್ಟಿಲಿನಲ್ಲಿ ಕೂಡಿಸಿ ಸಿಡಿ ಆಡಿಸಿದ ನಂತರ ದೇವಾಲಯದೊಳಗೆ ಕರೆದೊಯ್ದು ದೇವಿಯ ದರ್ಶನ ಮಾಡಿಸುತ್ತಿದ್ದ ದೃಶ್ಯ ಕಂಡುಬಂದಿತು.
ಜಾತ್ರಾ ಮಹೋತ್ಸವ ಮತ್ತು ತತ್ಸಂಬಂಧವಾಗಿ ನಡೆಯುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯ ಪ್ರಾಯೋಜಕ ಸಿ. ಮಹೇಶ್ಕುಮಾರ್, ದೇವಾಲಯ ಟ್ರಸ್ಟಿನ ಅಧ್ಯಕ್ಷ ಕೃಷ್ಣಪ್ಪ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಕುಸ್ತಿ ಪಂದ್ಯಾವಳಿ: ಶುಕ್ರವಾರ ಕುಸ್ತಿ ಪಂದ್ಯಾವಳಿಗಳು ಪ್ರಾರಂಭವಾಗಲಿದ್ದು, ಮೊದಲ ಸುತ್ತಿನಲ್ಲಿ ಸ್ಥಳೀಯ ಕುಸ್ತಿಪಟುಗಳು ಸೆಣಸಾಡುತ್ತಾರೆ. ಶನಿವಾರ ರಾಜ್ಯಮಟ್ಟದ ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸುವರು. ಭಾನುವಾರ ರಾಷ್ಟ್ರಮಟ್ಟದ ಕುಸ್ತಿಪಟುಗಳು ಸೆಣಸಾಡಲಿದ್ದು, ನಾಡಕೇಸರಿ ಪ್ರಶಸ್ತಿ ಪಡೆಯುವ ಕುಸ್ತಿಪಟುವಿಗೆ ಒಂದು ಬೆಳ್ಳಿ ಗದೆ ಮತ್ತು ಒಂದು ಲಕ್ಷ ರು. ನಗದು ಬಹುಮಾನ ನೀಡಲಾಗುವುದು. ಈ ಕುಸ್ತಿ ಪಂದ್ಯಾವಳಿಯಲ್ಲಿ ಒಟ್ಟು 6 ಲಕ್ಷ ನಗದು ಬಹುಮಾನ ನೀಡಲಾಗುತ್ತಿದ್ದು, ಈ ಎಲ್ಲಾ ಬಹುಮಾನಗಳನ್ನು ಸಿ. ಮಹೇಶ್ಕುಮಾರ್ ಅವರು ಪ್ರಾಯೋಜಿಸಿದ್ದಾರೆ.