ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ರೇಸ್
ವಿಶೇಷ ವರದಿ
ಶಿವಮೊಗ್ಗ: ಜಿಲ್ಲಾ ಪಂಚಾಯ್ತಿಯ ಕೊನೆಯ 20 ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಈ ಹುದ್ದೆಗೆ ಪೈಪೋಟಿ ಶುರುವಾಗಿದೆ.
ಈ ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು, ಆಡಳಿತ ಬಿಜೆಪಿಯ ಎಲ್ಲರೂ ಅರ್ಹರಾಗಿರುವುದರಿಂದ ಪೈಪೋಟಿ ಜೋರಾಗಿಯೇ ಸಾಗಿದೆ.
ಸದ್ಯ ಮೀಸಲಾತಿ ಪ್ರಕಟಣೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಲಾಗಿದೆ. ಇನ್ನೂ ಅಂತಿಮ ಗೆಜೆಟ್ ಹೊರಬಿದ್ದಿಲ್ಲ. ಮೇ ತಿಂಗಳಲ್ಲಿ ಹೊರಬೀಳುವ ನಿರೀಕ್ಷೆ ಇದೆ. ಇಷ್ಟರಲ್ಲೇ ರಾಜಕೀಯ ಚರ್ಚೆಗಳು ಮೇಲೆದ್ದಿವೆ.
31 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯು 16 ಸದಸ್ಯರೊಂದಿಗೆ ಸರಳ ಬಹುಮತ ಪಡೆದು ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ 13 ಹಾಗೂ ಜೆಡಿಎಸ್ 2 ಸದಸ್ಯರನ್ನು ಹೊಂದಿದೆ. ಜಿಲ್ಲಾ ಪಂಚಾಯ್ತಿ ಮೊದಲ ಅವಧಿಯಲ್ಲಿ ಶುಭಾ ಕೃಷ್ಣಮೂರ್ತಿ- ಹುಣವಳ್ಳಿ ಗಂಗಾಧರಪ್ಪ, ಎರಡನೇ ಅವಧಿಯಲ್ಲಿ ಗೀತಾ ಮಲ್ಲಿಕಾರ್ಜುನ- ಹೇಮಾ ಪಾವನಿ ಅವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಈ ನಾಲ್ವರನ್ನು ಹೊರತುಪಡಿಸಿದರೆ ಇನ್ನೂ 12 ಮಂದಿ ಆಕಾಂಕ್ಷಿಗಳಿದ್ದಾರೆ.
ಪುರುಷ ಅಧ್ಯಕ್ಷ: ಎರಡು ಅವಧಿಯಲ್ಲಿ ಮಹಿಳೆಯರೇ ಅಧ್ಯಕ್ಷರಾಗಿದ್ದರಿಂದ ಈ ಬಾರಿ ಪುರುಷರೊಬ್ಬರಿಗೆ ಅವಕಾಶ ನೀಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕಿನ ರುದ್ರಪ್ಪ ದಾನೇರ, ಈಶ್ವರಪ್ಪ, ನಡುವೆ ಪೈಪೋಟಿ ನಡೆಯಬಹುದು. ಮಹಿಳೆಯರಿಗೇ ನೀಡುವುದಾದರೆ ಹೊಳಲೂರು ಕ್ಷೇತ್ರದ ಗಾಯತ್ರಿ ಷಣ್ಮುಖಪ್ಪ ಪ್ರಬಲ ಸ್ಪರ್ಧಿಯಾಗಿದ್ದಾರೆ. ಏಕೆಂದರೆ ಸಾಮಾನ್ಯ ಮಹಿಳೆಗೆ ಮೀಸಲಾದ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿರುವ ಮಹಿಳಾ ಬಿಜೆಪಿ ಸದಸ್ಯೆ ಇವರು. ಇಂತದ್ದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶುಭಾ ಕೃಷ್ಣಮೂರ್ತಿ ಹಾಗೂ ಗೀತಾ ಮಲ್ಲಿಕಾರ್ಜುನ್ ಈಗಾಗಲೇ ಅಧ್ಯಕ್ಷರಾಗಿದ್ದಾರೆ.
ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯರಿಗೆ ಈ ಬಾರಿ ಅವಕಾಶ ಸಿಗುವ ಸಾಧ್ಯತೆ ಕಡಿಮೆಯೇ. ಹಾಗೇನಾದರೂ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಸೊರಬದ ಗುರುಕುಮಾರ್ ಪಾಟೀಲ್ ಅವರು ತಮ್ಮ ಅಭ್ಯರ್ಥಿತನ ಮಂಡಿಸಿದರೆ ಶಿವಮೊಗ್ಗದ ಅಶೋಕ್ ನಾಯ್ಕ್ ಹಾಗೂ ತೀರ್ಥಹಳ್ಳಿಯ ಯಲ್ಲಪ್ಪ ಸಹ ಸ್ಥಾನಕ್ಕೆ ಪಟ್ಟು ಹಿಡಿಯಬಹುದು.
ಕೊನೆಯ ಅವಧಿ: ಬಿಜೆಪಿಯಿಂದ ಆಯ್ಕೆಯಾದ ನಂತರ ಯಡಿಯೂರಪ್ಪ ಅವರು ಪಕ್ಷ ತೊರದಾಗ ಅವರ ಹಿಂದೆ ಅಧಿಕೃತವಾಗಿ ಹೋಗಲಾಗದೇ ಪ್ರತ್ಯೇಕ ವೇದಿಕೆ ರಚಿಸಿಕೊಂಡು, ಹಲವು ಗೊಂದಲಗಳ ಗೂಡಾಗಿದ್ದ ಬಿಜೆಪಿ ಸದಸ್ಯರು ಈಗ ಸ್ಪಷ್ಟವಾಗಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುತ್ತಿದ್ದಂತೆ ಗೊಂದಲಗಳು ನಿವಾರಣೆಯಾಗಿವೆ.
ಹಾಗಾಗಿ ಕೊನೆಯ ಅವಧಿಯ ಮುಖ್ಯಸ್ಥರ ಹುದ್ದೆಗೆ ಪೈಪೋಟಿ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ 20 ತಿಂಗಳ ಅವಧಿಯಲ್ಲಿ 10 ತಿಂಗಳಂತೆ ಎರಡು ಭಾಗವಾಗಿ ಮಾಡುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಮೀಸಲಾತಿ ಅಧಿಸೂಚನೆ ಹೊರಟ ನಂತರ ನಿಜವಾದ ಪೈಪೋಟಿ ನೋಡಲು ಸಿಗಲಿದ್ದು, ಅದಕ್ಕಿನ್ನೂ ಒಂದು ತಿಂಗಳು ಕಾಯಬೇಕಾಗಿದೆ.