ಅಪರಿಚಿತ ಶವಗಳ ಗುರುತು ಪತ್ತೆಗೆ ಮನವಿ
ಶಿವಮೊಗ್ಗ: ನಗರದ ಹಲವೆಡೆ ಮೃತಪಟ್ಟ ಅಪರಿಚಿತ ವ್ಯಕ್ತಿಗಳ ಚಹರೆಯನ್ನು ಪೊಲೀಸ್ ಇಲಾಖೆ ಪ್ರಕಟಿಸಿದೆ. ಈ ಸಂಬಂಧ ವಾರಸುದಾರರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ. ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಕಟ್ಟೆಯ ಮೇಲೆ ಮಾ.28 ರಂದು ಬೆಳಗ್ಗೆ 8.30 ಗಂಟೆಗೆ ಒಬ್ಬ ಹೆಂಗಸು ಸುಸ್ತಾಗಿ ಮಲಗಿದ್ದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಯಸ್ಸು 45-50 ವರ್ಷ. ಉದ್ದನೆಯ ಮುಖ, ಎಣ್ಣೆಗೆಂಪು ಬಣ್ಣ, ತೆಳು ಮೈಕಟ್ಟಿರುವ ಈಕೆಯ ವಾರಸುದಾರರು ಯಾರೆಂಬುದು ತಿಳಿದಿಲ್ಲ.
ಪುರುಷರ ಶವ: ಜ.17 ರಂದು ನಗರದ ಅಮೀರ್ ಅಹಮದ್ ವೃತ್ತದ ಬಳಿ 71 ವರ್ಷದ ಅಪರಿಚಿತ ವ್ಯಕ್ತಿ ನಿಶ್ಯಕ್ತಿಗೀಡಾದ ಹಿನ್ನೆಲೆ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಜ.19 ರಂದು ಅವರು ಮೃತಪಟ್ಟಿದ್ದಾರೆ. ಉದ್ದನೆಯ ಮುಖ, ಕಪ್ಪು ಬಣ್ಣ, ಬಿಳಿ ಕೂದಲು, ತೆಳುವಾದ ಮೈಕಟ್ಟು ಹೊಂದಿದ್ದಾರೆ. ಮಾ.2 ರಂದು ಖಾಸಗಿ ಬಸ್ ನಿಲ್ದಾಣದ ಎದುರು ವ್ಯಕ್ತಿಯೊಬ್ಬ ಕುಡಿದಿದ್ದು, ಬಸ್ ಸ್ಟ್ಯಾಂಡಿನ ಮೆಟ್ಟಿಲು ಹತ್ತಲು ಹೋಗಿ ಜೋಲಿ ತಪ್ಪಿ ಕೆಳಗೆ ಬಿದ್ದಿದ್ದ ಹಿನ್ನೆಲೆ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಾ.9 ರಂದು ಮೃತಪಟ್ಟಿದ್ದಾರೆ. ಸುಮಾರು 40-45 ವರ್ಷ, ಉದ್ದನೆಯ ಮುಖ, ಎಣ್ಣೆಗೆಂಪು ಬಣ್ಣ, ಬಿಳಿ ಕಪ್ಪು ಕೂದಲು ಹೊಂದಿದ್ದಾರೆ. ಈ ಮೃತಪಟ್ಟ ವ್ಯಕ್ತಿಗಳ ವಾರಸುದಾರರು ಯಾರಾದರೂ ಇದ್ದಲ್ಲಿ ತಕ್ಷಣ ದೊಡ್ಡಪೇಟೆ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಯುವತಿ ನೀರುಪಾಲು
ಸಾಗರ: ತಾಲೂಕಿನ ಹೊಳೆಬಾಗಿಲಿನಲ್ಲಿ ಸಿಗಂದೂರು ಕ್ಷೇತ್ರಕ್ಕೆ ಬಂದಿದ್ದ ಅನುಷಾ(19) ಎಂಬ ಯುವತಿ ಸ್ನಾನ ಮಾಡಲು ಶರಾವತಿ ಹಿನ್ನೀರಿಗೆ ಇಳಿದಿದ್ದಾಗ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನರಸಿಂಹಪೇಟೆ ನಿವಾಸಿಯಾಗಿದ್ದ ಅನುಷಾ ತನ್ನ ಕುಟುಂಬದವರ ಜತೆ ಶುಕ್ರವಾರ ಬೆಳಗ್ಗೆ ಟಾಟಾ ಸುಮೋದಲ್ಲಿ ಸಿಗಂದೂರು ಕ್ಷೇತ್ರಕ್ಕೆ ಬಂದಿದ್ದರು.ಬೆಳಗ್ಗೆ 7.30ರ ಸುಮಾರಿಗೆ ಕುಟುಂಬದವರು ಸ್ನಾನ ಮಾಡಲು ಲಾಂಚ್ ನಿಲ್ಲುವ ಕಾರಿಡಾರ್ನಿಂದ ನೀರಿಗೆ ಇಳಿದಿದ್ದರು. ಆಗ ಅನುಷಾ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಸ್ನಾನಕ್ಕೆ ಇಳಿದ ಮಗಳು ತುಂಬ ಹೊತ್ತಾದರೂ ಮೇಲೆ ಬರದೆ ಇರುವುದರಿಂದ ತಾಯಿ ಪಂಕಜ ಮಗಳನ್ನು ಮೇಲಕ್ಕೆತ್ತಲು ನೀರಿಗೆ ಇಳಿದಿದ್ದಾರೆ. ಅವರು ನೀರಿನಲ್ಲಿ ಮುಳುಗಿ ಹೋಗುತ್ತಿದ್ದಾಗ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಸ್ಥಳೀಯ ಈಜುಗಾರರು ನದಿಗೆ ಧುಮುಕಿ ಅನುಷಾರನ್ನು ಹುಡುಕುವ ಪ್ರಯತ್ನ ನಡೆಸಿದ್ದು ವಿಫಲವಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ: ವ್ಯಕ್ತಿ ಸಾವು
ಸಾಗರ: ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಾಗೆಹಳ್ಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಾಸಿ ಹುಚ್ಚೇಗೌಡ(56) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಧಿಕಾರಿಗೆ ಬಿಜೆಪಿ ಆಗ್ರಹ
ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಮಾಡುವಾಗ ಬ್ಯಾಂಕಿನ ಸಿಬ್ಬಂದಿ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಗೊಂದಲ ನಿರ್ಮಾಣ ಮಾಡಿ ಕೆಲವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕ್ಷೇತ್ರ ಬದಲಾವಣೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಸಹಕಾರಿ ಪ್ರಕೋಷ್ಠ ಹೇಳಿದ್ದು, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ಚುನಾವಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಶುಕ್ರವಾರ ಬಿಜೆಪಿ ಜಿಲ್ಲಾಧ್ಯಕ್ಷ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದು, ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಮಾಡಿದ ಮೊಬಲಗು ಸರ್ಕಾರದಿಂದ ಜಮಾ ಆಗದಿರುವ ವ್ಯವಸಾಯ ಸಹಕಾರ ಸಂಘಗಳನ್ನು ಬಾಕಿದಾರರೆಂದು ಪರಿಗಣಿಸಬಾರದು. ಚುನಾವಣಾ ಮತದಾರರ ಪಟ್ಟಿ ಮತ್ತು ಚುನಾವಣಾ ಕಾರ್ಯವನ್ನು ಬ್ಯಾಂಕಿನ ಮತ್ತು ಸಹಕಾರ ಇಲಾಖೆಯ ಸಿಬ್ಬಂದಿ ಹೊರತುಪಡಿಸಿ ತಾವೇ ಇತರೆ ಇಲಾಖೆಯ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದಿದ್ದಾರೆ.ಬ್ಯಾಂಕಿನ ಸಿಬ್ಬಂದಿ ಚುನಾವಣೆಗೆ ಸಂಬಂಧಪಟ್ಟ ದಾಖಲೆ ಕೇಳಿದಾಗ ನೀಡುತ್ತಿಲ್ಲ. ಈ ಬಗ್ಗೆ ದಾಖಲಾತಿ ನೀಡುವಂತೆ ತಾವು ನಿರ್ದೇಶನ ನೀಡಬೇಕೆಂದು ಅವರು ಜಿಲ್ಲಾಧಿಕಾರಿಯವರನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಹಂದಿಗೋಡು ರಾಜಶೇಖರ್, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ಎಸ್. ರಮೇಶ್, ರಾಘವೇಂದ್ರ, ನಾಗರಾಜ ಶೆಟ್ಟಿ, ವಿ. ರಾಜು, ತೇಜಕುಮಾರ್, ಬಿ.ಡಿ. ಭೂಕಾಂತ್ ಸೇರಿದಂತೆ ಹಲವರು ಇದ್ದರು.