ಕುಮಾರ್ ಬಂಗಾರಪ್ಪ ಮೇಲಿನ ಹಲ್ಲೆಗೆ ಖಂಡನೆ
ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಸಾವಿನ ಮನೆಯಲ್ಲಿ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬುಧವಾರ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರು ಕುಬಟೂರಿನ ಬಂಗಾರಪ್ಪನವರ ಮನೆ ಆವರಣದಲ್ಲಿ ತಾಯಿ ಶಕುಂತಲಮ್ಮನವರಿಗೆ ಅಂತಿಮ ವಿಧಿ- ವಿಧಾನ ನೆರವೇರಿಸಲು ಆಗಮಿಸಿದ್ದರು. ಆ ಸಮಯದಲ್ಲಿ ಅಲ್ಲಿಯೇ ಹಾಜರಿದ್ದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್ ಹಾಗೂ ಸೊರಬ ಜೆಡಿಎಸ್ ಮುಖಂಡ ಪಿ.ಎಸ್. ಮಂಜುನಾಥ ಎಂಬವರು ಕುಮಾರ್ ಬಂಗಾರಪ್ಪನವರ ಕೂದಲು ಜಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಯತ್ನಿಸಿದ್ದರು ಎಂದು ಜಿಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಬ್ಲಾಕ್ ಖಜಾಂಚಿ ಪಿ.ಎಸ್. ಗಿರೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿರ್ಸಿ ಕ್ಷೇತ್ರಕ್ಕೆ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಲು ಟಿಕೆಟ್ಅನ್ನು ಕುಮಾರ್ ಬಂಗಾರಪ್ಪನವರು ತಪ್ಪಿಸಿದ್ದಾರೆ ಎಂಬ ತಪ್ಪು ಗ್ರಹಿಕೆಯಿಂದ ಹಾಗೂ ಪಿ.ಎಸ್. ಮಂಜುನಾಥರವರು ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆಸಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರು ಈಗಾಗಲೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂತಹ ಹೀನ ಕೃತ್ಯಕ್ಕೆ ಕಾರಣರಾದವನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಮುಂದಾಗಬೇಕು. ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಬಂಧಿಸಿ, ಕ್ರಮ ಜರುಗಿಸದಿದ್ದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆನವಟ್ಟಿ ಪೊಲೀಸ್ ಠಾಣೆ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.