'ನಾನಕ್ಕನೆನ್ ನಿನಗೆ, ತಂಗೆ', 'ಪ್ರೇಮ ನವೋದಯ' ಕೃತಿ ಲೋಕಾರ್ಪಣೆ 29ರಂದು
ಶಿವಮೊಗ್ಗ: 'ನಾನಕ್ಕನೆನ್ ನಿನಗೆ, ತಂಗೆ' ಮತ್ತು 'ಪ್ರೇಮ ನವೋದಯ' ಎಂಬ ಎರಡು ಕೃತಿಗಳ ಲೋಕಾರ್ಪಣೆ ಏ.29 ರಂದು ನೆರವೇರಲಿದೆ.
ರಾಷ್ಟ್ರಕವಿ ಕುವೆಂಪು ಸೇರಿದಂತೆ ಕನ್ನಡದ ಕಾವ್ಯ ಪರಂಪರೆಯಲ್ಲಿ ಸಾರ್ವಕಾಲಿಕ ಮನ್ನಣೆ ಪಡೆದ ಮಹತ್ವದ ಕವಿಗಳ ವಿಭಿನ್ನ ಆಲೋಚನಾ ಕ್ರಮಗಳ ಪ್ರತಿಭಾ ವೈಶಿಷ್ಠ್ಯತೆಯ ಕುರಿತು ಕನ್ನಡ ಭಾರತಿ ವಿಭಾಗದ ಪ್ರಾಧ್ಯಾಪಕ ಪ್ರೊ. ಜಿ.ಪ್ರಶಾಂತ ನಾಯಕ ಬರೆದ ವಿಮರ್ಶಾತ್ಮಕ ಒಳನೋಟಗಳನ್ನು ಒಳಗೊಂಡ ಕೃತಿಗಳಿವು.
ಕುವೆಂಪು ವಿವಿಯ ಪ್ರೊ.ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಖ್ಯಾತ ಸಾಹಿತಿ, ಸಂಸ್ಕೃತಿ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಬೆಳಗ್ಗೆ 10.30ಕ್ಕೆ ಬಿಡುಗಡೆಗೊಳಿಸಲಿದ್ದಾರೆ.
ಸ್ತ್ರೀ ಸಂವೇದನೆ: ಕುವೆಂಪು ಅವರ 'ಶ್ರೀರಾಮಾಯಣ ದರ್ಶನಂ' ಕೃತಿಯಲ್ಲಿ ಸೀತೆ ಮತ್ತು ಮಂಡೋದರಿ ಪಾತ್ರಗಳು ನಿರೂಪಿತವಾಗಿರುವ ಬಗೆಯನ್ನು ಸ್ತ್ರೀ ಸಂವೇದನೆ ನೆಲೆಯಲ್ಲಿ ವಿಮರ್ಶೆಗೊಳಪಡಿಸಿರುವ 'ನಾನಕ್ಕನೆನ್ ನಿನಗೆ, ತಂಗೆ' ಕೃತಿ ಅಲಕ್ಷಿತ ಮಹಿಳಾ ಸಂವೇದನೆ ಶೋಧಿಸುತ್ತದೆ. ಈಗಾಗಲೇ ಆಗಿಹೋದ ಮಹಿಳಾ ಪಾತ್ರಗಳು ವರ್ತಮಾನದಲ್ಲೂ ಸಂವಾದಿಸಿಕೊಳ್ಳುವ ಬಗೆವಿವರಿಸಿದೆ. ಕುವೆಂಪು ವಿವಿ ಕುಲಪತಿ ಪ್ರೊ. ಎಸ್.ಎ. ಬಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವರಾದ ಪ್ರೊ. ಪ್ರೊ. ಮಲ್ಲಿಕಾ ಎಸ್. ಘಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.