ಬಾಲಕನ ಕಚ್ಚಿದ ನಾಯಿ
ಶಿರಾಳಕೊಪ್ಪ: ಪಟ್ಟಣದಲ್ಲಿ ಬೀದಿ ನಾಯಿ ಹಾವಳಿ ವಿಪರೀತವಾಗಿದ್ದು, 6 ವರ್ಷದ ಬಾಲಕನ ಮೇಲೆ 2 ನಾಯಿಗಳು ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಸಿವೆ. ಬಾಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಪಟ್ಟಣದ ಚೌಕಿ ಸಾಲಮರ ರಸ್ತೆಯ ಮಲ್ಲಿಕಾರ್ಜುನ ಶಾಲೆಯ ಬಳಿ ಆಟವಾಡುತ್ತಿದ್ದ ಆದರ್ಶ ಎಂಬ ಬಾಲಕನಿಗೆ ನಾಯಿಗಳು ಕಚ್ಚುತ್ತಿದ್ದವು. ಆಕ್ರಂದನ ಕೇಳಿ ಹತ್ತಿರವಿದ್ದ 4-5 ಹುಡುಗರ ಗುಂಪು ನಾಯಿ ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಬಾಲಕ ಭಾರತ್ ಗ್ಯಾಸ್ ಕಂಪನಿಯ ಗಂಗಾಧರ ಅವರ ಮಗ ಎಂದು ತಿಳಿದಿದೆ.
ಬಾಲಕಿ ಕಿವಿ ತುಂಡು: ಎರಡು ದಿನಗಳ ಹಿಂದೆ ಪಟ್ಟಣದ ದೊಡ್ಡಬ್ಯಾಣದ ಕೇರಿಯಲ್ಲಿ ರಸ್ತೆ ಮೇಲೆ ಓಡಾಡಿಕೊಂಡಿದ್ದ 3 ವರ್ಷದ ಬಾಲಕಿ ಮೇಲೂ ಬೀದಿ ನಾಯಿ ದಾಳಿ ಮಾಡಿ ಒಂದು ಕಿವಿಯನ್ನು ತುಂಡು ಮಾಡಿದ ಘಟನೆ ನಡೆದಿದ್ದಾಗಿ ತಡವಾಗಿ ಬೆಳಕಿಗೆ ಬಂದಿದೆ.
ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಚಿಕ್ಕಚಿಕ್ಕ ಮಕ್ಕಳು ರಸ್ತೆ ಮೇಲೆ ಓಡಾಡುತ್ತಾ ಆಟವಾಡುತ್ತಿರುವಾಗ ಈ ರೀತಿ ಬೀದಿ ನಾಯಿಗಳು ಕಚ್ಚಿದರೆ ಗತಿಏನು ಎಂಬ ಆತಂಕ ಪಟ್ಟಣದ ನಾಗರಿಕರಲ್ಲಿ ಉಂಟಾಗಿದೆ.
ಗಂಗಾಧರ ಶಿರಾಳಕೊಪ್ಪ ಪಪಂಗೆ ದೂರು ನೀಡುತ್ತಿರುವುದಾಗಿ ತಿಳಿಸಿದ್ದು, ನಾಗರಿಕರ ಹಿತದೃಷ್ಟಿಯಿಂದ ತಕ್ಷಣ ಪಪಂ ಮುಖ್ಯಾಧಿಕಾರಿಗಳು ಹಾಗೂ ಪಪಂ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.