ಬಸ್ಸು ನಿಲ್ದಾಣ ತೆರವು: ಜನರ ಪರದಾಟ
ಸೊರಬ: ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಪಟ್ಟಣದ ರಂಗನಾಥ ಗುಡಿಯ ಬಳಿ ಇದ್ದ ಬಸ್ಸು ನಿಲ್ದಾಣ ಕೆಡವಿದ್ದು, ಬಿಸಿಲು, ಮಳೆ ರಕ್ಷಣೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಪಪಂ ವ್ಯಾಪ್ತಿಗೆ ಸೇರುವ ಈ ಬಸ್ಸು ನಿಲ್ದಾಣವನ್ನು ಏಕಾಏಕಿ ಶನಿವಾರ ಮಧ್ಯಾಹ್ನ ಜೆಸಿಬಿ ಮೂಲಕ ತೆರವುಗೊಳಿಸಿದ್ದು, ದಿನದ ಅಧಿಕ ಬಿಸಿಲಿನ ತಾಪ ಮತ್ತು ಸಂಜೆ ಸುರಿದ ಮಳೆಯಿಂದ ಸೂರಿಲ್ಲದೆ ಪ್ರಯಾಣಿಕರು ಪೇಚಾಡುತ್ತಿದ್ದರು. ಸುತ್ತಲ ನಿವಾಸಿಗಳು ತೆರವುಗೊಳಿಸಿದ್ದಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೇರೆಬೇರೆ ಹಳ್ಳಿಗಳಿಗೆ ತೆರಳುವ ನೂರಾರು ಪ್ರಯಾಣಿಕರಿಗೆ ಈ ನಿಲ್ದಾಣ ಸುಮಾರು 40 ವರ್ಷದಿಂದ ನೆರಳಾಗಿತ್ತು. ಇಲ್ಲಿಯೇ ದಿನ ಪತ್ರಿಕೆ, ಜನಸಾಮಾನ್ಯರ ಅಗತ್ಯಕ್ಕೆ ಪೂರಕ ವಸ್ತುಗಳನ್ನು ಪೂರೈಸುವ ಚಿಕ್ಕ ಗೂಡಂಗಡಿಯೂ ಇತ್ತು. ಎನ್ನುವ ಇಲ್ಲಿನ ಅನೇಕ ನಿವಾಸಿಗಳು, ರಸ್ತೆ ಅಗಲೀಕರಣ ಪ್ರಕ್ರಿಯೆ ಆಮೆ ನಡಿಗೆ ಗತಿಯಲ್ಲಿ ಸಾಗುತ್ತಿದ್ದು, ಇನ್ನೂ ನಿವಾಸಿಗಳು ತಮ್ಮ ಮನೆ, ಅಂಗಡಿಗಳನ್ನು ಪೂರ್ಣತೆರವುಗೊಳಿಸಿಲ್ಲ ಎನ್ನುತ್ತಾರೆ.
ಈ ನಿಲ್ದಾಣ ಪಪಂ ಸುಪರ್ದಿಯಲ್ಲಿಯೇ ಇರುವುದರಿಂದ ಇನ್ನೂ ತಡವಾಗಿಯೇ ತೆರವುಗೊಳಿಸಲು ಅವಕಾಶವಿತ್ತು. ಆದರೆ, ಜನ ಸಾಮಾನ್ಯರ ಬವಣೆ ಕುರಿತು ಸ್ವಲ್ಪವೂ ಯೋಚಿಸುವ ಗೋಜಿಗೆ ಹೋಗದ ಅಧಿಕಾರಿಗಳು ಹೀಗೆ ಕೆಡವಿ ಇರುವ ನೆರಳಿಗೂ ಸಂಚಕಾರ ತಂದಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಕಟ್ಟಡ ಅಪಾಯದ ಸ್ಥಿತಿಯಲ್ಲಿತ್ತು ಹಾಗಾಗಿ ತೆರವುಗೊಳಿಸಿದ್ದೇವೆ ಎಂದು ಇಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಬೇಸರಿಸಿದ್ದಾರೆ.
ಕೂಡಲೆ ಈ ಜಾಗ ಸಮತಟ್ಟುಗೊಳಿಸಿ, ತಾತ್ಕಾಲಿಕ ನೆರಳಿನಾಶ್ರಯ ಮಾಡಿ ಪ್ರಯಾಣಿಕರಿಗೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.