ವಿಚಾರ ಸಂಕಿರಣ ಇಂದು
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತು ವಕೀಲರ ಸಂಘದ ಸಹಯೋಗದಲ್ಲಿ ಶಾಂತವೇರಿ ಗೋಪಾಲಗೌಡ ದತ್ತಿ ಮತ್ತು ಕಾಗೋಡು ಹೋರಾಟ ಒಂದು ಚಿಂತನೆ ದತ್ತಿ ಅಂಗವಾಗಿ ಪ್ರಜಾಪ್ರಭುತ್ವ-ಸಾಹಿತಿ-ಸಾಹಿತ್ಯ-ಹೋರಾಟ-ಚಿಂತನೆ ವಿಚಾರವಾಗಿ ಏ.27ರಂದು ವಿಚಾರ ಸಂಕಿರಣ ನಡೆಯಲಿದೆ. ಜಿಲ್ಲಾ ವಕೀಲರ ಭವನದಲ್ಲಿ ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಾಹಿತಿ ಡಾ.ಸಿದ್ದಲಿಂಗಯ್ಯ ಉದ್ಘಾಟಿಸಲಿದ್ದು, ಪ್ರಗತಿಪರ ಚಳುವಳಿ- ಸಾಹಿತ್ಯದ ಪ್ರಭಾವ ಕುರಿತು ಮಾತನಾಡಲಿದ್ದಾರೆ. ಪ್ರೊ. ಎಂ.ಬಿ.ನಟರಾಜ್ ಆಶಯ ಭಾಷಣ ಮಾಡಲಿದ್ದು, ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಅಶೋಕ ಜಿ.ಭಟ್ಟ ಉಪಸ್ಥಿತರಿರುವರು.
ಅಂಬೇಡ್ಕರ್ ಜನ್ಮ ದಿನಾಚರಣೆ
ಶಿವಮೊಗ್ಗ: ಕುವೆಂಪು ವಿವಿ ಅಂಬೇಡ್ಕರ್, ಬೌದ್ಧ ಅಧ್ಯಯನ ಕೇಂದ್ರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅಂಬೇಡ್ಕರ್ ಅವರ 123ನೇ ಜನ್ಮದಿನಾಚರಣೆ ಹಮ್ಮಿಕೊಂಡಿದೆ. ಏ.28 ರಂದು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಎಸ್.ಪಿ.ಹಿರೇಮಠ ಸಭಾಂಗಣದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ಎಸ್.ಎ.ಬಾರಿ ವಹಿಸುವರು. ಹಲವರು ಪಾಲ್ಗೊಳ್ಳುವರು.
ಆರ್ಎಸ್ಬಿವೈ ಯೋಜನೆ ವಿಸ್ತರಣೆ
ಶಿವಮೊಗ್ಗ: ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕಾರ್ಯಕರ್ತರು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದರು. ಬಡವರಿಗೆಂದು ಆರ್ಎಸ್ಬಿವೈ ಯೋಜನೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೂ ವಿಸ್ತರಣೆ ಮಾಡಲಾಗಿದೆ. ರಾಜ್ಯದ ಶೇ.75ರಷ್ಟು ಜನರಿಗೆ ಈ ಸೌಲಭ್ಯ ದೊರಕಲಿದೆ. ಈ ಯೋಜನೆ ಅಡಿ ಸಣ್ಣ ದೊಡ್ಡ ಶಸ್ತ್ರಚಿಕಿತ್ಸೆಗಳಿಗೆ ಉಚಿತವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಅವಕಾಶ ದೊರಕಲಿದೆ. ಹಾಗೆಯೇ ಹೆಣ್ಣು ಮಕ್ಕಳ ಮದುವೆಗೆ ಧನಸಹಾಯ, ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ವಸತಿ ನಿರ್ಮಾಣಕ್ಕೆ ಸಹಾಯಧನ, ಗರ್ಭಿಣಿಯರಿಗೆ ಚಿಕಿತ್ಸಾ ಸೌಲಭ್ಯ, ಪಿಂಚಣಿ ಸೌಲಭ್ಯ ಮತ್ತಿತರ ಸೌಲಭ್ಯ ದೊರಕುತ್ತದೆ. ಆದರೆ, ಜಿಲ್ಲೆಯಾದ್ಯಂತ ಈ ಯೋಜನೆ ನೋಂದಣಿ ಕಾರ್ಯ ಸರಿಯಾದ ರೀತಿಯಲ್ಲಿ ಆರಂಭವಾಗಿಲ್ಲ. ಚುನಾವಣೆ ಮುಕ್ತಾಯವಾಗಿರುವ ಕಾರಣ, ಇನ್ನಾದರೂ ಜಿಲ್ಲಾಡಳಿತ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾಡಳಿತದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು. ಮಧುಸೂಧನ್, ಚೇತನ್, ಶ್ರೀಜಿತ್, ದೇವೇಂದ್ರ, ಉಮೇಶ್ ಇದ್ದರು.