ಆಲಿಕಲ್ಲು ಸಹಿತ ಧಾರಾಕಾರ ಮಳೆ: ನಷ್ಟ
ತ್ಯಾಗರ್ತಿ: ಸಾಗರ ಮತ್ತು ಶಿವಮೊಗ್ಗ ತಾಲೂಕಿನ ಗಡಿಭಾಗದ ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶವಾದ ತ್ಯಾವರೆಹಳ್ಳಿ, ಜೇಡಿಸರ, ಅಂಧಾಸುರ, ಲಕ್ಕವಳ್ಳಿ, ತುಪ್ಪೂರು, ಗದ್ದೆಮನೆ, ಕೋಣೆಹೊಸೂರು, ಉದ್ದನೂರು ಗ್ರಾಮಗಳಲ್ಲಿ ಶನಿವಾರ ಸಂಜೆ-ರಾತ್ರಿ ಗುಡುಗು, ಮಿಂಚು, ಜೋರಾದ ಗಾಳಿ ಹಾಗೂ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದ್ದು ಭಾರಿ ಹಾನಿ ಸಂಭವಿಸಿದೆ.
ಅನಿರೀಕ್ಷಿತ ಮಳೆ ಸುರಿದ ಕಾರಣ ತ್ಯಾವರೆಹಳ್ಳಿ, ಜೇಡಿಸರ, ಅಂಧಾಸುರ, ಲಕ್ಕವಳ್ಳಿ ಗ್ರಾಮಗಳ ಕೆಲವು ಮನೆಯ ಚಾವಣಿಯ ಹಂಚು ಜಾರಿ ಬಿದ್ದು ಮನೆಯೊಳಗಡೆ ನೀರು ಸುರಿದಿದೆ. ಅಲ್ಲದೇ ಮಳೆಯ ಪರಿಣಾಮ ಹೊಸದಾಗಿ ನಾಟಿ ಮಾಡಿದ ಶುಂಠಿ, ಕಬ್ಬು, ಬಾಳೆ ಮತ್ತು ಅಡಕೆ ತೋಟಗಳಿಗೆ ನೀರು ನುಗ್ಗಿ ಚಿಕ್ಕ ಸಸ್ಯಗಳು ತೇಲಿಕೊಂಡು ಹೋಗಿವೆ. ಶುಂಠಿ ಪಟ್ಟೆ ಒಡೆದು ಹೋಗಿ ಏರಿ ಚೆಲ್ಲಾಪಿಲ್ಲಿಯಾಗಿ ಗೊಬ್ಬರ ಸಹಿತ ಬೀಜದ ಶುಂಠಿ ಸಹ ಕೊಚ್ಚಿಕೊಂಡು ಹೋದ ಉದಾಹರಣೆಯೂ ಇದೆ.
ವಾಹನ ಸಂಚಾರ ಸ್ಥಗಿತ: ಗಾಳಿ ಮಳೆಗೆ ವಿದ್ಯುತ್ ತಂತಿಗೆ ಧಕ್ಕೆಯಾಗಿ ಅಂಧಾಸುರ, ಕೊರಲಿಕೊಪ್ಪ, ಹೊಳ್ಳೂರುಗಳಲ್ಲಿ ಭಾನುವಾರ ಮಧ್ಯಾಹ್ನದ ವರೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ದೊಡ್ಡ ಗಾತ್ರದ ಆಲಿಕಲ್ಲು ಸುರಿದ ಕಾರಣ ಮನೆಯ ಚಾವಣಿಯ ಹಂಚು, ಎ.ಸಿ. ಶೀಟ್ಗಳು ಒಡೆದು ಭಾರಿ ನಷ್ಟ ಸಂಭವಿಸಿದೆ. ಅಲ್ಲದೇ ಸಂಜೆ ಅರ್ಧ ಗಂಟೆಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚರಿಸದೆ ಸ್ಥಗಿತವಾಗಿದ್ದವು.
ಆಲಿಕಲ್ಲು ಬಡಿದು ವಾಹನದ ಗಾಜು ಒಡೆಯುವ ಭೀತಿ ವಾಹನ ಚಾಲಕರಲ್ಲಿ ಉಂಟಾಗಿತ್ತು ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.
ಆಲಿಕಲ್ಲಿನ ಅಪ್ಪಳಿಸುವಿಕೆಗೆ ಬಾಳೆ ತೋಟ, ಪಪ್ಪಾಯಿ, ಕಲ್ಲಂಗಡಿ, ಮಾವು, ಅನಾನಸ್, ಹಲಸು ಇತ್ಯಾದಿ ಬೆಳೆಗಳು ಹಾನಿಗೊಂಡಿದೆ. ಕೋಣೆಹೊಸೂರು ಸಮೀಪದ ಬಾಳೆಕೊಪ್ಪದಲ್ಲಿ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್ ಮೇಲೆ ದೊಡ್ಡ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಲೈನ್ ತುಂಡಾಗಿದೆ.
ಭಾನುವಾರ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದುರಸ್ತಿಕಾರ್ಯದಲ್ಲಿ ತೊಡಗಿದ್ದರು.