ತುಂಗಾ ಚಾನಲ್ ತಡೆಗೋಡೆ ನಿರ್ಮಿಸಿ
ಶಿವಮೊಗ್ಗ ಸಮೀಪದ ಗಾಜನೂರಿನಲ್ಲಿ ಹರಿಯುವ ತುಂಗಾ ಚಾನಲ್ ತಡೆಗೋಡೆ ಇಲ್ಲವಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದೆ. ದಿನದಿಂದ ದಿನಕ್ಕೆ ಶಿವಮೊಗ್ಗ- ತೀರ್ಥಹಳ್ಳಿ ನಡುವೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಗಾಜನೂರಿನ ಈ ಸೇತುವೆ ಮೇಲೆ ವಾಹನ ದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ ವಾಹನ ಚಾಲಕರು ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸುವಂತಾಗಿದೆ.
ಈ ಚಾನಲ್ ಸೇತುವೆ ಬಹಳ ಹಳೆಯದಾಗಿದ್ದು, ದುಸ್ಥಿತಿಯಿಂದ ಕೂಡಿದೆ. ಇದೀಗ ಸೇತುವೆಯ ಒಂದು ಭಾಗದ ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಇದೇ ರಸ್ತೆಯಲ್ಲಿ ಓಡಾಡಿದರೂ, ಶಾಸಕರು ಮಂತ್ರಿಗಳು ತಿರುಗಿದರೂ ಸಹ ಅವರ ಕಣ್ಣಿಗೆ ಈ ಸಣ್ಣ ಸಮಸ್ಯೆ ಕಂಡುಬಂದಿಲ್ಲ. ಮುಂದೆ ಅವಘಡ ನಡೆದ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಅದರ ದುರಸ್ತಿಗೆ ಕ್ರಮಕೈಗೊಳ್ಳುವುದು ಉತ್ತಮ.
- ರವಿ ಆಚಾರ್ಯ, ಯಲವಟ್ಟಿ