ಶೋಷಿತರ ರಕ್ಷಣೆಗೆ ಸಾಹಿತಿಗಳು ದನಿ ಎತ್ತಲಿ: ಡಾ. ಸಿದ್ದಲಿಂಗಯ್ಯ
ಶಿವಮೊಗ್ಗ: ಮುಂದಿನ ದಿನಗಳಲ್ಲಿ ಶೋಷಿತರ ರಕ್ಷಣೆಗಾಗಿ, ಕನ್ನಡದ ಉಳಿವಿಗಾಗಿ ಮತ್ತು ಮೌಢ್ಯದ ನಿವಾರಣೆಗಾಗಿ ಹಾಗೂ ಗಾಂಧೀಜಿ, ಲೋಹಿಯಾ ಅವರು ಕಂಡಿದ್ದ ಕನಸುಗಳು ನನಸಾಗಬೇಕಾದರೆ ಸಾಹಿತಿಗಳು ಮತ್ತು ಬುದ್ದಿಜೀವಿಗಳು ದನಿ ಎತ್ತಬೇಕಿದೆ ಎಂದು ಕವಿ ಡಾ. ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.
ನಗರದ ವಕೀಲರ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್, ವಕೀಲರ ಸಂಘ ಸಂಯುಕ್ತವಾಗಿ ಶಾಂತವೇರಿ ಗೋಪಾಲಗೌಡ ಹಾಗೂ ಕಾಗೋಡು ಹೋರಾಟ ಒಂದು ಚಿಂತನೆ ದತ್ತಿಗಳ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಸಾಹಿತಿ- ಸಾಹಿತ್ಯ ಹೋರಾಟ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಚಾರಿಕ ಹೋರಾಟ: ಗೋಪಾಲಗೌಡ ಲೋಹಿಯಾ ಅಂತಹವರು ವೈಚಾರಿಕ ಹೋರಾಟಕ್ಕೆ ಮತ್ತೆ ಹುಟ್ಟಿಬರಬೇಕಿದೆ. ಬಡವರ ಹಿತದೃಷ್ಟಿಗೆ ಲೋಹಿಯಾ ಚಿಂತನೆ ಬಹುಮುಖ್ಯ. ದೇಶಕ್ಕೆ ಮಾರ್ಕ್ಸ್ ಹಾಗೂ ಲೋಹಿಯ ಇಬ್ಬರೂ ಬೇಕು. ಇವರ ಮಾರ್ಗದರ್ಶನಗಳನ್ನು ಅಳವಡಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದರು. ಯುವಜನತೆ ಜನಪರ ಹೋರಾಟಗಳಲ್ಲಿ ಧುಮುಕದಿದ್ದರೆ, ದೇಶ ಅಧಃಪತನವಾಗುತ್ತದೆ ಎಂದರು.
ಯುವಕರು, ವಿದ್ಯಾರ್ಥಿಗಳಲ್ಲಿ ಮೌಢ್ಯತೆ ವಿಜೃಂಭಿಸುತ್ತಿರುವುದರಿಂದ, ಸ್ವಹಿತಾಸಕ್ತಿ ಈಡೇರಿಸಿಕೊಳ್ಳುವುದರಲ್ಲಿ ತೊಡಗಿದ್ದಾರೆ. ಅವರಲ್ಲಿ ಹೋರಾಟದ ಕಿಚ್ಚನ್ನು ವೈಚಾರಿಕತೆ ಎಂಬ ದೀಪದಿಂದ ಹಚ್ಚಬೇಕಿದೆ ಎಂದರು. ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ನಟರಾಜ್, ಅಶೋಕ್ ಭಟ್, ಶ್ರೀಪಾಲ,ನಾಗರಾಜ್, ನಾಗರಾಜ್, ರಾಚಪ್ಪ, ಸಿರಾಜ್ ಅಹ್ಮದ್, ರಾಘವೇಂದ್ರ, ಪ್ರಕಾಶ್ ಮರ್ಗನಹಳ್ಳಿ ಇದ್ದರು.