ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸಾಹಿತಿಗೆ ಬರಹವೇ ಅಧಿಕಾರ, ಪ್ರಭಾವ ಆಗಿರಲಿ: ರಾಜೇಂದ್ರ ಚೆನ್ನಿ

Rashmi Kasaragodu
Updated On : 28 Apr 2014, 11:05 am

ಶಿವಮೊಗ್ಗ:  ರೋಚಕತೆ ಸಾಧ್ಯವಿದ್ದರೂ ಸಹ ಅಂತಹ ಕೆಲಸ ಮಾಡದೇ ಲಂಕೇಶ್ ಹಾಗೂ ಡಿ.ಆರ್. ನಾಗರಾಜ್ ಅವರು ಮಾರ್ಗಗಳ ಬಗ್ಗೆ ಧ್ಯಾನ ಮಾಡಿ 'ಇಂತಿ ನಮಸ್ಕಾರಗಳು' ಕೃತಿ ಬರೆದಿದ್ದಾರೆ ಎಂದು ಸಂಸ್ಕೃತಿ ಚಿಂತಕ ರಾಜೇಂದ್ರ ಚೆನ್ನಿ ಹೇಳಿದರು.
ನಗರದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಸಂಜೆ ಹೊಂಗಿರಣ ಸಂಸ್ಥೆಯು ಪಲ್ಲವ ಪ್ರಕಾಶನ ಜತೆಗೂಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟರಾಜ ಹುಳಿಯಾರ್ ಅವರ 'ಇಂತಿ ನಮಸ್ಕಾರಗಳು' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಸಾಹತುಶಾಹಿ ಭೌತಿಕ ಜಗತ್ತಿನಿಂದ ಹೊರಬರದ 3ನೇ ಜಗತ್ತಿನಲ್ಲಿ ಬರೆಯುತ್ತಿದ್ದ ಡಿಆರ್ ಹೊಸ ದಾರಿ ತೋರಿಸಿದ್ದು ಅತಿಶಯೋಕ್ತಿ ಅಲ್ಲ. ಗುರುಶಿಷ್ಯ ಸಂಬಂಧ ಪೂರ್ತಿ ಡೆಮಾಕ್ರೆಟಿಕ್ ಆಗಿರಬೇಕು. ಆದರೆ, ನಾವು ಹಲವು ಅನ್‌ಡೆಮಾಕ್ರೆಟಿಕ್ ಸ್ಥಿತಿಯನ್ನು ನೋಡುತ್ತಿದ್ದೇವೆ. ಹಲವರು ಶಿಷ್ಯವರ್ಗವನ್ನು ತಮ್ಮ ಅನೈತಿಕ, ಅಧಿಕಾರದ ಕೇಂದ್ರವಾಗಿ ಹೇಗೆ ಕಟ್ಟಿಕೊಂಡಿದ್ದಾರೆ. ಒಬ್ಬ ಸಾಹಿತಿಗೆ ಬರಹವೇ ಅಧಿಕಾರ- ಪ್ರಭಾವ ಆಗಿರಬೇಕೇ ಹೊರತು, ಗುರುವಾದ ಕಾರಣಕ್ಕೆ ಸಿಗುವ ಪ್ರಭಾವ ಆಗಿರಬಾರದು. ದೊಡ್ಡ ಬರಹಗಾರರು ಮಠಗಳನ್ನು ಮಾಫಿಯಗಳನ್ನು ಕಟ್ಟಿರುವುದು ಇಲ್ಲ. ಪ್ರಜಾಪ್ರಭುತ್ವದ ಜಾಗ ಸಾಹಿತ್ಯದಲ್ಲಿದೆ ವಿಚಾರದಲ್ಲಿದೆ. ಅದನ್ನೇ ಬಳಸಿಕೊಳ್ಳುವುದು ಸರಿ ಅಲ್ಲ. ಆದರೆ, ನಟರಾಜ್ ಆ ರೀತಿ ಮಾಡಿಲ್ಲ ಎಂದರು. ಯಾವ ಕೃತಿಗಳು ಸಮುದಾಯದ ಆಳವಾದ ಅನುಭವಗಳಿಗೆ ಅಭಿವ್ಯಕ್ತಿ ಕೊಡುತ್ತವೆಯೋ ಅವುಗಳನ್ನು ಕನ್ನಡ ಓದುಗ ವರ್ಗ ಅಭಿಮಾನದಿಂದ ಬರಮಾಡಿಕೊಳ್ಳುತ್ತದೆ ಎಂಬುದಕ್ಕೆ ಈ ಕೃತಿ ಸಾಕ್ಷಿ ಎಂದರು.
'ಇಂತಿ ನಮಸ್ಕಾರಗಳು' ಕೃತಿಯನ್ನು ಒಂದು ಸಾಂಸ್ಕೃತಿಕ ಕಾದಂಬರಿ ಆಗಿಯೂ ಕಾಣಬಹುದು. ಕಥಾನಕವೂ ಹೌದು, ಸೃಷ್ಟಿಶೀಲ ಬರಹ, ಸಂಸ್ಕೃತಿಯ ನಿರೂಪಣೆಯೂ ಹೌದು ಎಂದ ರಾಜೇಂದ್ರ ಚೆನ್ನಿ, ಲಂಕೇಶ್ ಹಾಗೂ ಡಿ.ಆರ್. ನಾಗರಾಜ್ ಅವರ ಬರಹಗಳು ಎರಡು ಬಹುದೊಡ್ಡ ಲೋಕದ ದೃಷ್ಟಿಗಳು. ಅವರ ನಡುವಿನ ಕಥಾನಕವನ್ನು ಹುಳಿಯಾರ್ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಲೇಖಕ ನಟರಾಜ ಹುಳಿಯಾರ್, ಲಂಕೇಶರು ಯಾವುದೇ ವ್ಯಕ್ತಿಯನ್ನು ತುಂಭಾ ವಿಭಿನ್ನ ನೆಲೆಯಲ್ಲಿ ಗ್ರಹಿಸುತ್ತಿದ್ದರು. ಹಾಗಾಗಿಯೇ ಅವರ ವಿಮರ್ಶೆಯಲ್ಲಿ ಅಪೂರ್ವವಾದ ಒಳನೋಟಗಳು ಸಿಗುತ್ತಿದ್ದವು ಎಂದು ಹೇಳಿದರು.
ಪ್ರಕಾಶಕ ಪಲ್ಲವ ವೆಂಕಟೇಶ್, ಬಿ. ಚಂದ್ರೇಗೌಡ ಇದ್ದರು. ಕಡಿದಾಳು ಶಾಮಣ್ಣ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement