ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯಂತ್ರ ದೋಶದಿಂದ ನೀರಿನ ಕೃತಕ ಅಭಾವ

Rashmi Kasaragodu
Updated On : 29 Apr 2014, 11:07 am

ಕ.ಪ್ರ.ವಾರ್ತೆ, ಶಿಕಾರಿಪುರ, ಏ.28
ಬರದಿಂದಾಗಿ ರಾಜ್ಯದ ಜನತೆ ತತ್ತರಿಸಿದ್ದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಿಕಾರಿಪುರ ಪಟ್ಟಣದ ಜನ ಕಳೆದ ಕೆಲದಿನದಿಂದ ಕುಡಿವ ನೀರಿನ ಕೃತಕ ಅಭಾವ ಎದುರಿಸುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಅಧಿಕಾರಿ, ಜನಪ್ರತಿನಿಧಿಗಳು ಎಚ್ಚೆತ್ತು ಶೀಘ್ರ ನೀರಿನ ಸಮಸ್ಯೆ ಪರಿಹರಿಸಬೇಕಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಸ್ಪಕ್ಷೇತ್ರ ಶಿಕಾರಿಪುರ ಸಂಪೂರ್ಣ ಅಭಿವೃದ್ಧಿ ಮೂಲಕ ರಾಜ್ಯದ ನಕ್ಷೆಯಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದರು.
ಪ್ರತ್ಯೇಕ ಪೈಪ್ ಲೈನ್: ರಸ್ತೆ, ಚರಂಡಿ, ಬೀದಿದೀಪ, ಉದ್ಯಾನವನ, ಶಾಲಾ ಕಾಲೇಜು, ಸರ್ಕಾರಿ ಕಟ್ಟಡ ಮತ್ತಿತರ ಕಾಮಗಾರಿ ಜತೆಗೆ ಶಿಕಾರಿಪುರ ಹಾಗೂ ಶಿರಾಳಕೊಪ್ಪದ ಜನ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲದಂತೆ ಬಹು ದೊಡ್ಡ ಅಂಜನಾಪುರ ಜಲಾಶಯದ ಮೂಲಕ ಕುಡಿಯುವ ನೀರು ಸತತ ಸರಬರಾಜಿಗೆ ಪ್ರತ್ಯೇಕ ಪೈಪ್ ಲೈನ್ ವ್ಯವಸ್ಥೆಯನ್ನು ತಮ್ಮ ಅಧಿಕಾರಾವಧಿಯಲ್ಲಿ ಕಲ್ಪಿಸಿಕೊಟ್ಟಿದ್ದಾರೆ.
ಇಂತಹ ಬಹು ಮಹತ್ವಾಕಾಂಕ್ಷೆ ಯೋಜನೆಯ ಮೂಲಕ ನೀರು ಬಿರು ಬೇಸಿಗೆಯಲ್ಲಿಯೂ ತೊಂದರೆಯಾಗದಂತೆ ವ್ಯವಸ್ಥೆಯನ್ನು ಕಲ್ಪಿಸಿದ್ದರೂ, ಕಳೆದ ವಾರದಿಂದ ಪೈಪ್ ಲೈನ್‌ನಲ್ಲಿನ ಬಿರುಕಿನಿಂದಾಗಿ ಹಾಗೂ ನೀರು ಸಂಗ್ರಹಣ ಘಟಕದಲ್ಲಿನ ಯಂತ್ರದ ದೋಷದಿಂದಾಗಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಪಟ್ಟಣದ ಜನತೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರತಿಬಾರಿ ಯಂತ್ರದ ದೋಷದ ಕಾರಣಕ್ಕೆ ಪ್ರತ್ಯೇಕ ಯಂತ್ರವನ್ನು ಮೀಸಲರಿಸಲಾಗದ ಪುರಸಭೆಯ ಅಧಿಕಾರಿಗಳ, ಸದಸ್ಯರ ನಿರ್ಲಕ್ಷ್ಯ ಅನುಮಾನಕ್ಕೆ ಆಸ್ಪದವಾಗಿದೆ.
ಪರ್ಯಾಯ ಯಂತ್ರವಿಲ್ಲ: ಪಟ್ಟಣವನ್ನು ಮಾದರಿಯನ್ನಾಗಿಸಿ ಜಿಲ್ಲಾ ಕೇಂದ್ರಕ್ಕೆ ಸರಿಸಮಾನವಾಗಿಸುವ ಉದ್ದೇಶ ಹೊಂದಲಾಗಿದ್ದರೂ, ವ್ಯಕ್ತಿಯ ಕನಿಷ್ಠ ಮೂಲ ನೀರಿನ ಅವಶ್ಯಕತೆ ಸಮಸ್ಯೆಯಾಗದಂತೆ ಪರ್ಯಾಯ ಯಂತ್ರವನ್ನು ಅಳವಡಿಸಿಕೊಳ್ಳಲಾಗದ ಪುರಸಭೆಯ ಆಡಳಿತದ ಬಗ್ಗೆ ಸಮಾಜಸೇವಕ ಎಸ್.ಎಂ. ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದು, ನೀರಿನ ಕಂದಾಯವನ್ನು ಮುಂಗಡವಾಗಿ ಪಡೆಯುವ ಪುರಸಭೆ ಸಮಸ್ಯೆ ತಲೆದೋರದಂತೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
 ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಮನೋಹರ್, ನೀರು ಶುದ್ಧೀರಣ ಘಟಕದಲ್ಲಿನ 4 ಯಂತ್ರದಲ್ಲಿ 30 ವರ್ಷ ಹಳೆಯ 1 ಯಂತ್ರದ ದೋಷದಿಂದ ಸಮಸ್ಯೆ ಬಿಗಡಾಯಿಸಿದ್ದು ಇದರಿಂದಾಗಿ ರಥಬೀದಿ ಬಲಬಾಗ ಛಾನಕ್ ಕೇರಿ, ಆರೇರಕೇರಿ, ಅಂಬೇಡ್ಕರ್ ನಗರ, ಜಯನಗರ, ಕುಂಬಾರ ಗುಂಡಿ,
ಗಬ್ಬೂರು , ಜಟ್ ಪಟ್‌ನಗರದ ಕೆಲಬಾಗಕ್ಕೆ ಸಮಸ್ಯೆಯಾಗಿದ್ದು, ಪೈಪ್ ಲೈನ್, ಯಂತ್ರದ ದೋಷಕ್ಕೆ ಪುರಸಭೆ ಪರ್ಯಾಯವಾಗಿ ಕೊಳವೆ ಬಾವಿ, ಟ್ಯಾಂಕ್ ಮೂಲಕ ಸರಬರಾಜಿಗೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ರಾಜ್ಯ ನೀರು ಸರಬರಾಜು ಮಂಡಳಿಯ ಅನುಮತಿ ಪಡೆದು ರು. 30 ಲಕ್ಷ ವೆಚ್ಚದಲ್ಲಿ 2 ಯಂತ್ರ ಖರೀದಿಸಿ ಭವಿಷ್ಯದಲ್ಲಿ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪಟ್ಟಣದ ಹಲವೆಡೆ ಅನವಶ್ಯಕ ನೀರು ಪೋಲು ಗುರುತಿಸಿ ಮಾಲೀಕರಿಗೆ ತಿಳಿವಳಿಕೆ ಜತೆ ಕಾನೂನು ಕ್ರಮದ ಎಚ್ಚರಿಕೆ ಮೂಲಕ ಪುರಸಭೆ ನೀರಿನ ಸದ್ಬಳಕೆಗೆ ಮುಂದಾಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement