ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಗರ ತಾಲೂಕು ಬಿಜೆಪಿ ಪ್ರತಿಭಟನೆ

Rashmi Kasaragodu
Updated On : 29 Apr 2014, 11:06 am

ಸಾಗರ: ಶೃಂಗೇರಿಯ ತನಿಕೋಡು ಚೆಕ್‌ಪೋಸ್ಟ್ ಬಳಿ ನಕ್ಸಲ್ ನಿಗ್ರಹ ಪಡೆಯಿಂದ ನಡೆದ ಎನ್‌ಕೌಂಟರ್ ಸಂಬಂಧ ಸರ್ಕಾರ ಮತ್ತು ಪ್ರಗತಿಪರ ಸಂಘಟನೆ ತೆಳೆದಿರುವ ನಿಲುವು  ಖಂಡಿಸಿ, ಪೊಲೀಸ್ ಸಿಬ್ಬಂದಿ ಅಮಾನತು ರದ್ದುಗೊಳಿಸುವಂತೆ ಒತ್ತಾಯಿಸಿ ಇಲ್ಲಿನ ಬಿಜೆಪಿ ವತಿಯಿಂದ ಸೋಮವಾರ ರಸ್ತೆತಡೆ ಹಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಸಂಘ ಪರಿವಾರದ ಪ್ರಮುಖರಾದ ಅ.ಪು. ನಾರಾಯಣಪ್ಪ ಮಾತನಾಡಿ, ಆಡಳಿತಾರೂಢ ಸರ್ಕಾರ ಅಪರಾಧಿಗಳ ಪರವಾಗಿ ನಿಲ್ಲುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ದೇಶದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಲು ಪರೋಕ್ಷವಾಗಿ ರಾಜ್ಯ ಸರ್ಕಾರ ಹಾಗೂ ಪ್ರಗತಿಪರ ಸಂಘಟನೆ ಸಹಕಾರ ನೀಡುತ್ತಿವೆ. ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಬೇಕಾದ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತಿರುವುದು ಖಂಡನೀಯ ಎಂದರು.
ಒಡೆದು ಆಳುವ ನೀತಿ: ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಕಾಂಗ್ರೆಸ್ ಸರ್ಕಾರ ಅಧಿಕಾರ ಭದ್ರಪಡಿಸಿಕೊಳ್ಳಲು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಗೃಹಮಂತ್ರಿ ಕೆ.ಜೆ. ಜಾರ್ಜ್ ಕೋಮುವಾದಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಅಮಾನತುಗೊಳಿಸಿದ ನವೀನ್ ನಾಯಕ್ ಅವರನ್ನು ಕೆಲಸಕ್ಕೆ ಕರೆದುಕೊಳ್ಳಬೇಕು ಎಂದು ಆಗ್ರಹಿಸಿದರು.  
ಮುಖ್ಯಮಂತ್ರಿಗಳು ಮಾಡಿದ ತಪ್ಪಿಗೆ ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಗೋವು ಕಳ್ಳಸಾಗಾಣಿಕೆ ಮಾಡುತ್ತಿರುವ ಸಂದರ್ಭದಲ್ಲಿ ಎ.ಎನ್.ಎಫ್. ಪಡೆಯಿಂದ ಹತನಾದ ಕಬೀರ್ ಕುಟುಂಬಕ್ಕೆ ನೀಡಿದ ರು. 10 ಲಕ್ಷ ಪರಿಹಾರಧನ ತಡೆಹಿಡಿಯಬೇಕು. ವಿಚ್ಛಿದ್ರಕಾರಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವ ರಾಜ್ಯ ಸರ್ಕಾರ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಚೇತನರಾಜ್, ರಾಜ್ಯ ಸರ್ಕಾರ ತನಿಕೋಡು ಎನ್ ಕೌಂಟರ್ ಪ್ರಕರಣವನ್ನು ಸಿಒಡಿ, ನ್ಯಾಯಾಂಗ ತನಿಖೆಗೆ ಒಪ್ಪಿಸುವ ಮೂಲಕ ಸತ್ಯವನ್ನು ಸಮಾಧಿ ಮಾಡಲು ಯೋಚಿಸುತ್ತಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ರೈತರು ಸತ್ತರೆ ಕುಡಿದು ಸತ್ತಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಸಿದ್ದರಾಮಯ್ಯ, ಗೋವು ಕಳ್ಳಸಾಗಾಣಿಕೆ ಮಾಡುವಾಗ ಎ.ಎನ್.ಎಫ್. ಗುಂಡಿಗೆ ಬಲಿಯಾದ ಕಬೀರನನ್ನು ವೈಭವೀಕರಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದರು.
ಬಿಜೆಪಿ ಪ್ರಮುಖರಾದ ಯು.ಎಚ್. ರಾಮಪ್ಪ, ಸತೀಶಬಾಬು, ಶ್ರೀನಿವಾಸ್, ಸಿ. ಅರವಿಂದ್, ಸಂತೋಷ್ ಆರ್. ಶೇಟ್, ಅಕ್ಷರ, ರಾಜು ಬಿ. ಮಡಿವಾಳ, ನಾಗರಾಜ್, ಚಂದ್ರಕಾಂತ ಜಿಂಗಾಡೆ, ಅನುಪಮ, ಲಲಿತಾ ರಾವ್, ಗಣೇಶ ಪ್ರಸಾದ್, ವಿ. ಮಹೇಶ್, ವಿಜಯಕುಮಾರ್, ಅರುಣ ಘಾಟೆ, ಕುಸುಮ ಸುಬ್ಬಣ್ಣ, ಕೋರಿ ನಾಗರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement