'ಸುಸ್ಥಿರ ಜೀವನ ಕ್ರಮದಿಂದ ನೆಮ್ಮದಿ'
ಹೊಸನಗರ: ಸುಸ್ಥಿರ ಜೀವನ ಕ್ರಮ ಅಳವಡಿಸಿಕೊಂಡು ಪ್ರಕೃತಿ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಅವಶ್ಯಕತೆ ಇದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.
ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ದಿನ ನಿತ್ಯದ ಹಲವಾರು ವಸ್ತುಗಳನ್ನು ಪುನರ್ಬಳಕೆ ಮಾಡುವ ಮೂಲಕ ಸುಸ್ಥಿರ ಜೀವನಕ್ಕೆ ದಾರಿ ಮಾಡಿಕೊಡಬೇಕಾಗಿದೆ ಎಂದರು.
ಕುರುಡು ಜೀವನ: ಸಮೂಹ ಮಾಧ್ಯಮಗಳು ಜನರ ಮನಸ್ಸನ್ನು ಕೆಡಿಸುತ್ತಿವೆ. ಇದರ ಬಗ್ಗೆ ಎಚ್ಚರ ವಹಿಸುವುದು ಅವಶ್ಯವಾಗಿದೆ. ಪುಸ್ತಕಗಳನ್ನು ಓದುವ ಮೂಲಕ ಹೆಚ್ಚಿನ ಜ್ಞಾನವನ್ನು ಗಳಿಸಲು ಸಾಧ್ಯವಾಗುತ್ತದೆ. ಮೂರ್ಖರ ಪೆಟ್ಟಿಗೆಗೆ ಮಾರು ಹೋಗದೆ ಪುಸ್ತಕ ಲೋಕಕ್ಕೆ ಮನಸ್ಸು ಕೊಡುವುದು ಅವಶ್ಯ ಎಂದ ಅವರು, ಜಾಹೀರಾತಿಗೆ ಮರುಳಾಗಿ ಜೀವನದ ಹಲವಾರು ನೈಜ ಅಂಶಗಳ ಬಗ್ಗೆ ಇಂದಿನ ಯುವ ಜನಾಂಗ ಕುರುಡಾಗುತ್ತಿರುವ ಬಗ್ಗೆ ವಿಷಾದಿಸಿದರು.
ಆರಕ್ಷಕ ವೃತ್ತ ನಿರೀಕ್ಷಕ ಡಿ. ರವಿಕುಮಾರ್ ಮಾತನಾಡಿ, ಪುಸ್ತಕಗಳ ಜೊತೆಗಿನ ಒಡನಾಟ ಬದುಕಿನ ಮೌಲ್ಯವನ್ನು ಹೆಚ್ಚಿಸುತ್ತದೆ. ಶಿಸ್ತು ಹಾಗೂ ಸಂಯಮದ ಜೀವನ ನಡೆಸುವ ಮೂಲಕ ಸಮಾಜದ ಉತ್ತಮ ನಾಗರಿಕರಾಗಲು ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಕರುಣಾಕರ್ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಪಿ. ಶಿವಮೂರ್ತಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕರಾದ ಕೆ.ಸಿ. ಸೌಮ್ಯ, ಎಚ್.ವೈ. ಸುಧಾಕರ್ ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕ ಎಚ್.ಎನ್. ಈಶ್ವರಪ್ಪ ಸ್ವಾಗತಿಸಿ, ಅಭಿಶೇಕ್ ವಂದಿಸಿದರು.