600, 1440 ತೆರಿಗೆ ಯಾವ ಪುರುಷಾರ್ಥಕ್ಕೆ?
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಏ.29
ಮಹಾನಗರ ಪಾಲಿಕೆಯ ತೆರಿಗೆ ನೀತಿ ವಿರುದ್ಧ ಶಿವಮೊಗ್ಗದ ವಿವಿಧ ಬಡಾವಣೆ ಸಂಘಟನೆಗಳು ಗುಡುಗಿವೆ. ಕೂಡಲೇ ನಿರ್ಧಾರ ಬದಲಿಸದೇ ಹೋದಲ್ಲಿ ಹೋರಾಟ ತೀವ್ರಗೊಳಿಸುವ ಜೊತೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ, ಶಿವಮೊಗ್ಗ ನಗರ ಬಂದ್ ನಡೆದರೂ ಆಶ್ಚರ್ಯವಿಲ್ಲ ಎಂದು ಪಾಲಿಕೆಗೆ ಎಚ್ಚರಿಸಿವೆ.
ಮಂಗಳವಾರ ನಾಗರಿಕ ಹಿತರಕ್ಷಣಾ ವೇದಿಕೆಗಳ ನೇತೃತ್ವದಲ್ಲಿ ಪಾಲಿಕೆ ಎದುರು ಜಮಾಯಿಸಿದ್ದ ಸಾರ್ವಜನಿಕರು, ವಿವಿಧ ಬಡಾವಣೆಗಳಿಂದ ಬಂದಿದ್ದ ಸಂಘಟನೆಗಳ ನೂರಾರು ಸದಸ್ಯರು, ಪಾಲಿಕೆಯ ತೆರಿಗೆ ನಿರ್ಧಾರದ ವಿರುದ್ಧ ಘೋಷಣೆ ಕೂಗಿದರು.
2013ರ ಏ.1 ರಿಂದ ಅನ್ವಯವಾಗುವಂತೆ ಹೆಚ್ಚುವರಿ ತೆರಿಗೆ ವಸೂಲಾತಿಗೆ ಇಳಿದಿರುವ ಪಾಲಿಕೆಯು ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಬೇಕು ಎಂದು ಪಟ್ಟುಹಿಡಿದರಲ್ಲದೇ, ಯಾವುದೇ ಕಾರಣಕ್ಕೂ ಅವೈಜ್ಞಾನಿಕವಾದ ತೆರಿಗೆ ಪಾವತಿ ಸಾಧ್ಯವಿಲ್ಲ ಎಂದು ಹೇಳಿದರು.
ಟೀಕೆ: 600 ಘನ ತ್ಯಾಜ್ಯ ವಿಲೇವಾರಿ ಶುಲ್ಕ ಸಂಗ್ರಹಿಸುತ್ತಿರುವ ಶಿವಮೊಗ್ಗ ನಗರಪಾಲಿಕೆ, ರಾಜ್ಯದ ಯಾವುದೇ ಪಾಲಿಕೆ ಮಾಡದ ಸಾಧನೆ ಮಾಡಲು ಹೊರಟಿದೆ ಎಂದು ಟೀಕಿಸಿದ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ವಸಂತಕುಮಾರ್, ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಇಲ್ಲದ ಕಸ ಕರ ಸಂಗ್ರಹ ಶಿವಮೊಗ್ಗದಲ್ಲೇಕೆ? ನಗರದ ಶೇ.50 ರಷ್ಟು ಭಾಗದಲ್ಲಿ ಕಸ ಸಂಗ್ರಹಣೆಗೆ ತಳ್ಳುಗಾಡಿಯ ವ್ಯವಸ್ಥೆಯೇ ಇಲ್ಲ. ಆದರೂ ಇಡೀ ನಗರದಲ್ಲಿ ಈ ಕಸ ಸಂಗ್ರಹ ಕರ ವಸೂಲಿ ಮಾಡುತ್ತಿರುವುದು ಪಾಲಿಕೆಯಿಂದಾಗುತ್ತಿರುವ ಶೋಷಣೆಯೇ ಸರಿ ಎಂದು ಟೀಕಿಸಿದರು.
ಖಾಲಿ ನಿವೇಶನಗಳಿಗೆ ಸ್ವಚ್ಛತೆ ಹೆಸರಿನಲ್ಲಿ 600 ರುಪಾಯಿ ವಿಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಪಾಲಿಕೆ ತನ್ನ ನಿಲುವು ಸಡಿಲಿಸುವುದು ಅನಿವಾರ್ಯ. ಇಲ್ಲವಾದರೆ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.
ಅಶುದ್ಧವಾದ ಕುಡಿಯುವ ನೀರಿನ ಬಾಬ್ತು ಪಾಲಿಕೆ 720 ದಿಂದ 1440 ತೆರಿಗೆ ಹೆಚ್ಚಿಸಿರುವುದು ಮಹಾ ದುರಂತ. ಶುದ್ಧವಾದ ನೀರನ್ನು ಪೂರೈಸಬೇಕಾದ ಪಾಲಿಕೆ ಅಶುದ್ಧ ನೀರು ಪೂರೈಸಿ ತೆರಿಗೆಯನ್ನು ದುಪ್ಪಟ್ಟುಗೊಳಿಸಿರುವುದು ಜನವಿರೋಧಿ ನೀತಿ ಎಂದು ಸಾಮಾಜಿಕ ಹೋರಾಟಗಾರ ಜನಮೇಜಿರಾವ್ ತಿಳಿಸಿದರು.
ಪಾಲಿಕೆಯವರಿಗೆ ಸಾಧ್ಯವೇ?: ಪಾಲಿಕೆ ವ್ಯಾಪ್ತಿಯಲ್ಲಿ ಖಾತೆ ಹೊಂದಿರುವ 1000 ಚದರಡಿಗಿಂತ ಕಡಿಮೆ ಇರುವ ಖಾಲಿ ನಿವೇಶನಗಳಿಗೆ ವಾರ್ಷಿಕ 300 ಹಾಗೂ ಇದಕ್ಕಿಂತ ಹೆಚ್ಚಿನ ಖಾಲಿ ನಿವೇಶನಗಳಿಗೆ ಸ್ವಚ್ಛತೆ ಹೆಸರಲ್ಲಿ 600 ತೆರಿಗೆ ವಿಧಿಸುವುದು ಎಷ್ಟು ಸರಿ? ರಾಜ್ಯದ ಯಾವುದೇ ನಗರದಲ್ಲಿ ಖಾಲಿ ನಿವೇಶನಗಳಿಗೆ ಸ್ವಚ್ಛತಾ ಶುಲ್ಕ ವಿಧಿಸುತ್ತಿಲ್ಲ. ಅಲ್ಲದೇ, ಎರಡು ತಿಂಗಳಿಗೊಮ್ಮೆ ಸ್ವಚ್ಛತಾ ಕಾರ್ಯವೂ ನಡೆಯುತ್ತಿಲ್ಲ. ಹೀಗಿರುವಾಗ ಖಾಲಿ ನಿವೇಶನಗಳ ಸ್ವಚ್ಛತಾ ಮಾಡಲು ಪಾಲಿಕೆಯವರಿಗೆ ಸಾಧ್ಯವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಆಸ್ತಿ ವರ್ಗಾವಣೆ ಶುಲ್ಕ ಕಾನೂನುಬಾಹಿರವಾಗಿ ರೂಪಿಸಲಾಗಿದೆ. ಸ್ಥಿರಾಸ್ತಿ ಹಕ್ಕು ಬದಲಾವಣೆಗೆ ಛಾಪಾ ಕಾಗದ ಬೆಲೆಯ ಮೇಲೆ ಶೇ.1.5 ಅಥವಾ 2ರಷ್ಟು ನಿಗದಿಯಾಗಿದೆ. ನಗರಪಾಲಿಕೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಆದೇಶಕ್ಕೆ ವಿರುದ್ಧವಾಗಿ ಆಸ್ತಿ ಮೂಲದ ಮೇಲೆ ಶೇ.1 ರಂತೆ ಮತ್ತು ಶೇ.0.5 ರಂತೆ ಶುಲ್ಕ ವಸೂಲು ಮಾಡುತ್ತಿರುವುದು ಕಾನೂನಿನ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರ ವಿವರಣೆ.
ಎಚ್ಚರಿಕೆ: ಈಗಾಲೇ ಹಲವು ಬಾರಿ ಬೇಡಿಕೆ ಬಗ್ಗೆ ಪಾಲಿಕೆಯ ಗಮನ ಸೆಳೆಯಲಾಗಿದೆ. ಆದರೂ ಸಹ ಸ್ಪಂದನೆ ತೋರಿಸಿಲ್ಲ. ಆದ್ದರಿಂದ ಮುಂದಿನ 15 ದಿನಗಳೊಳಗೆ ಸಭೆ ಕರೆದು ಚರ್ಚಿಸಿ ನಾಗರಿಕ ಸ್ನೇಹಿ ನಿರ್ಧಾರ ಕೈಗೊಳ್ಳದೇಹೋದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಕರಭೀಮಣ್ಣನವರ್, ಮೇಯರ್ ಖುರ್ಷಿದಾ ಬಾನು, ಉಪ ಮಹಾಪೌರರಾದ ರೇಖಾ ಚಂದ್ರಶೇಖರ್, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಮನವಿಗೆ ಸ್ಪಂದಿಸುವುದು ಕಷ್ಟಸಾಧ್ಯ. ನೀತಿ ಸಂಹಿತೆ ಹಿಂತೆಗೆದುಕೊಂಡ ನಂತರ ಏ.22 ರಂದು ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಡಾ. ಎನ್.ಎಲ್. ನಾಯಕ್, ಅಶೋಕಮೂರ್ತಿ, ಸತೀಶ್ಕುಮಾರ ಶೆಟ್ಟಿ, ಮಂಜುನಾಥ್ ಮತ್ತಿತರರು ಇದ್ದರು.