ಎಸಿ ಉದ್ಧಟತನ; ಕಚೇರಿ ಎದುರು ಧರಣಿ
ಕಚೇರಿಗೆ ಬಾರದಂತೆ ಬೆದರಿಕೆಯೊಡ್ಡಿದ ಕ್ರಮಕ್ಕೆ ಪುಟ್ಟಸ್ವಾಮಿ ಖಂಡನೆ
ಸಾಗರ: ಉಪವಿಭಾಗಾಧಿಕಾರಿಗಳು ತಮ್ಮ ಜೊತೆ ಉದ್ದಟತನದಿಂದ ವರ್ತಿಸಿದ್ದಾರೆಂದು ಆರೋಪಿಸಿ ಗೀಜಗ ವಾಸಿ ಜಿ.ಬಿ.ಪುಟ್ಟಸ್ವಾಮಿ ಎಂಬುವವರು ವಿವಿಧ ಸಂಘಟನೆಗಳ ಕಾರ್ಯಕರ್ತರೊಂದಿಗೆ ಮಂಗಳವಾರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ತಮ್ಮ ಜಮೀನು ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದೆ. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು ನೀನು ಇನ್ನು ಮುಂದೆ ನನ್ನ ಕಚೇರಿಗೆ ಬರಬೇಡ. ಕಚೇರಿಗೆ ಬಂದರೆ ನಿನ್ನ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪುಟ್ಟಸ್ವಾಮಿ ದೂರಿದರು.
ಅಧಿಕಾರಿ ವರ್ತನೆಗೆ ಖಂಡನೆ: ಒಬ್ಬ ನಾಗರಿಕನಾಗಿ ನನ್ನ ಹಕ್ಕನ್ನು ಪಡೆಯಲು ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ವಿಚಾರಣೆ ದಿನ ಹಾಜರಾಗಿರುವುದು ತಪ್ಪೆ ಎಂದು ಪ್ರಶ್ನಿಸಿರುವ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ಉಪವಿಭಾಗಾಧಿಕಾರಿಗಳು ನನ್ನೊಂದಿಗೆ ನಡೆದುಕೊಂಡ ರೀತಿ ಭಯ ತರಿಸುವಂತೆ ಇತ್ತು. ಹಣವಂತರ ಪರವಾಗಿ ವಕಾಲತ್ತು ವಹಿಸಿ, ಅಮಾಯಕರಿಗೆ ಅನ್ಯಾಯ ಮಾಡುತ್ತಿರುವ ಉಪವಿಭಾಗಾಧಿಕಾರಿಗಳ ಕೃತ್ಯ ಖಂಡನೀಯ ಎಂದರು.
ಜಮೀನು ವ್ಯಾಜ್ಯ ಇತ್ಯರ್ಥ ಪಡಿಸುವಂತೆ ಮಾನವಹಕ್ಕು ಆಯೋಗ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಜಿಲ್ಲಾಧಿಕಾರಿಗಳು ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಆದೇಶಿಸಿರುತ್ತಾರೆ. ಆದರೆ ಉಪವಿಭಾಗಾಧಿಕಾರಿಗಳು ನ್ಯಾಯ ಕೇಳಲು ಹೋದ ನನ್ನಂತಹ ಅಮಾಯಕನನ್ನು ಬೆದರಿಸುವುದು ಎಷ್ಟು ಸರಿ. ತಕ್ಷಣ ಮಾನವಹಕ್ಕು ಆಯೋಗದಿಂದ ಆದೇಶಿಸಲ್ಪಟ್ಟಂತೆ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಪರಮೇಶ್ವರ ದೂಗೂರು, ಕಬಸೆ ಅಶೋಕಮೂರ್ತಿ, ಕೆ.ಎ.ಕುಮಾರಸ್ವಾಮಿ ಕೊಪ್ಪ, ಪ್ರಕಾಶ ಗೌಡ, ಲಕ್ಷ್ಮಣ ಕಂಬಳಿಕೊಪ್ಪ, ಅಮೃತರಾಸ್ ಹಾಜರಿದ್ದರು.