ಬಾಬಾ ರಾಂದೇವ್ ಮೇಲೆ ಕ್ರಮಕ್ಕೆ ಆಗ್ರಹ
ಶಿವಮೊಗ್ಗ: ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಾಬಾ ರಾಮ್‌ದೇವ್ ಅವರ ವಿರುದ್ಧ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಚಿನ್ನಯ್ಯ ಜಿಲ್ಲಾ ಸಂಚಾಲಕರಾಗಿರುವ ದಲಿತ ಸಂಘರ್ಷ ಸಮಿತಿಯು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಲಖ್ನೋದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ರಾಹುಲ್ ಗಾಂಧಿ ಅವರನ್ನು ಟೀಕಿಸುವ ಭರಾಟೆಯಲ್ಲಿ ದಲಿತರನ್ನು ಅವಹೇಳನ ಮಾಡಿದ್ದಾರೆ. ದಲಿತರ ಮನೆಗಳಿಗೆ ಹನಿಮೂನ್ ಮತ್ತು ಪಿಕ್‌ನಿಕ್ ಮಾಡಲು ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲು ಹೋಗುತ್ತಿದ್ದಾರೆ ಎಂದು ದಲಿತರಿಗೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡಿರುತ್ತಾರೆ.
ಅಧ್ಯಾತ್ಮದ ಬಗ್ಗೆ ಮಾತನಾಡುವ ಇವರ ಕೀಳುಮಟ್ಟದ ಬುದ್ಧಿ ಇದರಿಂದ ಪ್ರದರ್ಶಿತವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯೈಕ್ತಪಡಿಸಿದ್ದಾರೆ.
ಹಲವು ಭೂ ಹಗರಣಗಳಲ್ಲಿ ಭಾಗಿಯಾಗಿರುವ ರಾಮ್‌ದೇವ್ ಅವರು ಪತಂಜಲಿ ಟ್ರಸ್ಟ್ ಹೆಸರಿನಲ್ಲಿ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಪ್ಪು ಹಣ ವಿಚಾರವಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಮಹಿಳೆಯಂತೆ ವೇಷ ಬದಲಿಸಿ ತಪ್ಪಿಸಿಕೊಂಡು ಬಂದಿದ್ದನ್ನು ನೋಡಿದರೆ ಇವರ ಡೋಂಗಿ ಹೋರಾಟ ಅರ್ಥವಾಗುತ್ತದೆ. ಚುನಾವಣಾ ಆಯೋಗ ನಿಷೇಧ ಹೇರಿದ ನಂತರವು ಪತ್ರಿಕಾಗೋಷ್ಠಿ ನಡೆಸಿ ಆಯೋಗದ ಆದೇಶ ಧಿಕ್ಕರಿಸಿದ್ದಾರೆ ಎಂದಿದ್ದಾರೆ.
ರಾಮ್‌ದೇವ್ ಅವರನ್ನು ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿಸಿ, ದೇಶದಲ್ಲಿ ಜಾತಿ ವಿಷ ಬೀಜ ಬಿತ್ತುತ್ತಿರುವ ಇವರನ್ನು ಕೂಡಲೇ ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಕೆ.ಎ. ರಾಜಕುಮಾರ್, ಪಳನಿ ರಾಜ್, ಎಂ. ರಂಗಪ್ಪ ಸೇರಿದಂತೆ ಹಲವರು ಇದ್ದರು.