ಬಿರುಗಾಳಿ, ಮಳೆ: ಜನಜೀವನ ಅಸ್ತವ್ಯಸ್ತ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.30
ಭಾರೀ ಬಿರುಗಾಳಿ ಮತ್ತು ಆಲೀಕಲ್ಲು ಸಹಿತ ಭಾರಿ ಮಳೆ ಯಿಂದ ಶಿರಾಳಕೊಪ್ಪ ಹತ್ತಿರದ ಮಳೂರ ಮತ್ತು ಜಾವಗಟ್ಟೆ ಗ್ರಾಮಗಳು ತತ್ತರಿಸಿ ಹೋಗಿದ್ದು,ಕನಿಷ್ಠ 300ಕ್ಕೂ ಹೆಚ್ಚು ಮನೆ ಹಾನಿ ಆಗಿದ್ದು, ಗ್ರಾಮದ ಕೆಲವರಿಗೆ ಜಾವಗಟ್ಟಿಯ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.
ಮಂಗಳವಾರ ಸಂಜೆ ಮಳೂರ ಮತ್ತು ಜಾವಗಟ್ಟಿ ಗ್ರಾಮದ ಬಳಿ ಬೀಸಿದ ಬಿರುಗಾಳಿ ಕೆಲವೇ ನಿಮಿಷದಲ್ಲಿ ಮನೆ ಮೇಲಿದ್ದ ಹಂಚು, ತಗಡುಗಳು ಹಾರಿ ಮನೆಗಳು ಸೂರಿಲ್ಲದಂತೆ ದಿಕ್ಕೆಟ್ಟು ರಕ್ಷಣೆಗೆ ಪರಿತಪಿಸುವಂತೆ ಮಾಡಿ ರಾತ್ರಿಪೂರ್ಣ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಯಿತು.
ಬೀಸಿದ ಬಿರುಗಾಳಿಗೆ ಮಳೂರ ಗ್ರಾಮದ ನಿವೃತ್ತ ಅರಣ್ಯ ಇಲಾಖೆಯ ಪುಟ್ಟಪ್ಪ ಮತ್ತು ನೀಲಪ್ಪ ಎಂಬುವವರ ಫಸಲು ಬಿಡುತ್ತಿದ್ದ ನೂರಾರು ಅಡಕೆ ಮರಗಳು ನೆಲಕ್ಕುರಳಿದರೆ, ನೂರಾರು ಇತರ ಜಾತಿ ಮರಗಳು ಬುಡಸಹಿತ ಮತ್ತು ತುಂಡಾಗಿ ಬಿದ್ದವು. ಮನೆ ತಗಡು ಸಾಕಷ್ಟು ದೂರ ಹಾರಿಹೋದರೆ ಕೆಲವು ಮನೆಯ ಚಾವಣಿ ಯಾವುದಕ್ಕೂ ಬಾರದಂತೆ ಮುರಿದು ಹೋಗಿವೆ. ಮಳೂರ ಗ್ರಾಮದ ಶಾಲೆಯ ಬಳಿ ಇರುವ ಟ್ರಾನ್ಸ್‌ಫಾರ್ಮರ್ ಉರುಳಿದ್ದು, ಶಾಲೆ ಕಾಂಪೌಂಡ್ ಮೇಲೆ ಬಿದ್ದಿದೆ.
ಮಳೂರ ಗ್ರಾಮದ ಲೋಕಪ್ಪ ಎಂಬುವವರ ಮನೆ ಚಾವಣಿ ಕುಸಿದು, ದೊಡ್ಡದಾದಾದ ಕರು ಒಂದು ಸ್ಥಳದಲ್ಲಿ ಮೃತಪಟ್ಟಿದೆ.
ಇದೇ ಮೊದಲು: ಗ್ರಾಮದ ಹಿರಿಯರಾದ 65 ವರ್ಷದ ರಾಜಪ್ಪ ಎಂಬುವವರು ಪತ್ರಿಕೆಗೆ ಹೇಳಿಕೆ ನೀಡಿ ನಮ್ಮ ಗ್ರಾಮದಲ್ಲಿ ಈವರೆಗೆ ಇಂತಹ ಬಿರುಗಾಳಿ ಮತ್ತು ಅನಾಹುತ ಈ ವರೆಗೆ ಕಂಡಿರಲಿಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ತಹಸೀಲ್ದಾರ್ ಸ್ಥಳಕ್ಕೆ ಹಾಜರಾಗಿ ಆಗಿ ಪರಶೀಲಿಸಿದರು. ಬುಧವಾರ ಬೆಳಕು ಹರಿಯುತ್ತಿದ್ದಂತೆಯೇ ಸಿಬ್ಬಂದಿಯೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ, ದಿನಪೂರ್ತಿ ಮನೆಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಜೊತೆಯಲ್ಲಿ ತಾಪಂ ಕಾರ್ಯನಿರ್ವಣಾಧಿಕಾರಿ ಡಾ. ಚಂದ್ರಶೇಖರ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ದಾನಿರುದ್ರಪ್ಪ ಮತ್ತು ಇತರ ಚುನಾಯಿತ ಪ್ರತಿನಿಧಿಗಳು ಸಮರೋಪಾದಿಯಲ್ಲಿ ಸ್ಪಂದಿಸಿ ಪರ್ಯಾಯ ವ್ಯವಸ್ಥೆಗೆ ಸಹಕಾರ ನೀಡಿದರು.
ಗಂಜಿಕೇಂದ್ರ ಪ್ರಾರಂಭ: ಜಾವಗಟ್ಟಿಯ ಗೋಮಾಳದಲ್ಲಿ ಮನೆಕಟ್ಟಿಕೊಂಡ ಹಿಂದುಳಿದ ಗ್ರಾಮಸ್ಥರಿಗೆ ಸಂಪೂರ್ಣ ಮನೆ ಹಾನಿ ಆದ ಕಾರಣ ಜಾವಗಟ್ಟಿಯ ಸರ್ಕಾರಿ ಶಾಲೆಯಲ್ಲಿ ಗಂಜೀಕೇಂದ್ರ ತೆರೆದು ತಾತ್ಕಾಲಿಕ ಪರಿಹಾರ ವ್ಯವಸ್ಥೆ ಮಾಡಲಾಯಿತು.
ತಾಲೂಕಿನ ಪ್ರಥಮ ಮೊರಾರ್ಜಿ ಶಾಲೆಯಾದ ಮಳೂರ ಶಾಲೆಯ ಕಟ್ಟಡದ ಮೇಲೆ ಅಳವಡಿಸಲಾಗಿದ್ದ ಸೋಲಾರ್ ಲೈಟಿಂಗ್ ಹಾಗೂ ವಾಟರ್ ಹೀಟರ್‌ಗೆಂದು ಹಾಕಲಾಗಿದ್ದ ಬ್ರಹತ್ ಸೆಟ್‌ಗಳು ಗಾಳಿಗೆ ಹಾರಿ ಕೆಳಗೆ ಬಿದ್ದು, ಸಂಪೂರ್ಣ ನಾಶವಾಗಿವೆ. ಕನಿಷ್ಠ ರು. 3ಲಕ್ಷಕ್ಕೂ ಹೆಚ್ಚುಮೌಲ್ಯದ ಸೋಲಾರ್ಸ್‌ಂಪೂರ್ಣನಾಶವಾಗಿದೆ.
ಪರ್ಯಾಯ ವ್ಯವಸ್ಥೆಗೆ ಒತ್ತಾಯ: ಜಾವಗಟ್ಟಿಯ ಗೋಮಾಳದಲ್ಲಿ ಎರಡು ಕಡೆ ಮನೆಕಟ್ಟಿಕೊಂಡಿದ್ದ 30ಕ್ಕೂ ಹೆಚ್ಚು ಕುಟುಂಬ ಮಳೆ ಗಾಳಿಯಿಂದ ಸಂಪೂರ್ಣ ನಿರ್ಗತಿಕವಾಗಿದೆ. ಆದರೆ ಅವರಿಗೆ ಪರಿಹಾರ ಕೊಡಿಸಲು ಮನೆ ಕಟ್ಟಿಕೊಂಡು ಜಾಗದ ನಿವೇಶನವಾಗಲೀ ಸ್ಥಳವಾಗಲೀ ಅವರ ಹೆಸರಲ್ಲಿ ಇಲ್ಲದ ಕಾರಣ ಅವರಿಗೆ ಪರಿಹಾರ ಮರೀಚಿಕೆ ಆಗಲಿದೆ ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳು ಏನಾದರೂ ಮಾಡಿ ಅವರಿಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಪಂ ಸದಸ್ಯ ಫಾಲಾಕ್ಷಪ್ಪ, ವಿರುಪಾಕ್ಷಪ್ಪ, ಗ್ರಾಪಂ ಕಾರ್ಯದರ್ಶಿ ಗ್ರಾಪಂ ಮಾಜಿ ಸದಸ್ಯ ದೇವರಾಜಪ್ಪ, ರುದ್ರಪ್ಪ ಗ್ರಾಮಸ್ಥರೊಂದಿಗೆ ಇದ್ದು, ಸಂಪೂರ್ಣಸಹಕಾರ ನೀಡಿದರು.