ಬೀಳ್ಕೊಡುಗೆಗೆ ಕೈಕೊಟ್ಟ ಪೌರಾಯುಕ್ತ
ಕ.ಪ್ರ.ವಾರ್ತೆ ಭದ್ರಾವತಿ ಏ. 30
ಪೌರಾಯುಕ್ತ ಬಿ.ಡಿ.ಬಸವರಾಜಪ್ಪ ಬುಧವಾರ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಆದರೆ, ಚುನಾಯಿತ ನಗರಸಭಾ ಸದಸ್ಯರು ಮತ್ತು ಸಿಬ್ಬಂದಿ ಅವರಿಂದ ಬೀಳ್ಕೊಡುಗೆ ಗೌರವ ಸ್ವೀಕರಿಸುವ ಸಂದರ್ಭ ಕೈಗೆ ಸಿಗದೇ ನಗರದಲ್ಲಿ ಸುದ್ದಿ ಮಾಡಿದರು.
ಇದಕ್ಕೆ ಕಾರಣ, ಗಂಗಾವತಿಯಲ್ಲಿ ಪೌರಾಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾಗ ಬಸವರಾಜಪ್ಪ ಅವರಿಗೆ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಅವರಿಗೆ ನೋಟಿಸ್ ಜಾರಿಗೊಳಿಸಲು ಭದ್ರಾವತಿಗೆ ಬಂದಿದ್ದಾರೆಂದು ಎಂಬುದೆಂದು ನಂತರ ತಿಳಿದುಬಂತು. ಈ ಬಗ್ಗೆ ಮೊದಲೇ ಮಾಹಿತಿ ಇದ್ದಿದ್ದರಿಂದಲೇ ಬಹುಶಃ ಬಸವರಾಜಪ್ಪ ಅವರು ಕಚೇರಿಗೆ ಗೈರಿ ಹಾಜರಾಗಿದ್ದಾರೆ ಎಂದು ಕೆಲವರು ಬಹಿರಂಗ ಚರ್ಚೆ ನಡೆಸಿದ್ದು ಕಂಡುಬಂತು.
ನಿವೃತ್ತಿ ಹೊಂದಿದ ವಿಷಯ ತಿಳಿದು ನಗರಸಭಾಧ್ಯಕ್ಷರು, ಉಪಾಧ್ಯಕ್ಷರು, ಚುನಾಯಿತು ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿವರ್ಗ ಮಧ್ಯಾಹ್ನದ ಮೇಲೆ ಕಚೇರಿಗೆ ಪೌರಾಯುಕ್ತರು ಬರಬಹುದೆಂಬ ನಿರೀಕ್ಷೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಾಗೂ ಪ್ರಭಾರ ಪೌರಾಯುಕ್ತರಿಗೆ ಸ್ವಾಗತ ಸಮಾರಂಭವನ್ನೂ ಏರ್ಪಡಿಸಿದ್ದರು. ಆದರೆ ಪೌರಾಯುಕ್ತ ಬಿ.ಡಿ.ಬಸವರಾಜಪ್ಪ ಸಂಜೆಯವರೆಗೂ ಬಾರದ ಕಾರಣ ಆ ಸಮಾರಂಭ ನಡೆಯದಾಯಿತು.
ಪ್ರಕರಣ ಕಾರಣ: ಭದ್ರಾವತಿಯ ನಗರಸಭಾ ವ್ಯಾಪ್ತಿಯ ಕಡದಕಟ್ಟೆಯಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸಂಬಂಧಿಸಿದ ಜಾಗದಲ್ಲಿ ಭೂಸ್ವಾಧೀನ ನಿಯಮವನ್ನು ಉಲ್ಲಂಘಿಸಿ ಗುತ್ತಿಗೆದಾರರೊಂದಿಗೆ ಭ್ರಷ್ಟಾಚಾರದಲ್ಲಿ ಷಾಮೀಲಾಗಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ನೀಡಿದ್ದಾರೆಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವಿ.ಸುರೇಶ್‌ಕುಮಾರ್ ಎಂಬವರು ಲೋಕಾಯುಕ್ತರ ಮುಂದೆ ಪ್ರಕರಣ ದಾಖಲು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಭದ್ರಾವತಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಓ.ಎಸ್.ನಂ.280.12 ದಾವೆಯನ್ನು ಹೂಡಿದ್ದು ನ್ಯಾಯಾಲಯವು ಪೌರಾಯುಕ್ತರಿಗೆ ನ್ಯಾಯಾಲಯದ ಮುಂದೆ ಏ.10 ರಂದು ಹಾಜರಾಗುವಂತೆ ಆದೇಶ ನೀಡಿತ್ತು.
ಅದರಂತೆ ಪೌರಾಯುಕ್ತ ಬಿ.ಡಿ.ಬಸವರಾಜಪ್ಪ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಲಯ ನೀಡಿದ ನೋಟಿಸ್ ಅನ್ವಯ ಷೆಡ್ಯೂಲ್ ಆಸ್ತಿಯಲ್ಲಿ ಯಾವುದೇ ನೀರಿನ ಟ್ಯಾಂಕಿನ ನಿರ್ಮಾಣ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ ಮೇರೆಗೆ ನ್ಯಾಯಾಲವು ಸ್ಥಳ ಪರಿಶೀಲನೆಗೆ ವಕೀಲ ಆಯುಕ್ತರನ್ನು ನೇಮಿಸಲು ಹಾಗೂ ಅಗತ್ಯ ಬಿದ್ದಾಗ ಪೌರಾಯುಕ್ತ ಬಸವರಾಜಪ್ಪ ನ್ಯಾಯಾಲಯದ ಮುಂದೆ ಹಾಜರಾಗುವಂತೆಯೂ ಏ.10ರಂದು ಆದೇಶ ನೀಡಿದೆ.
ನಿವೃತ್ತಿ ಹೊಂದಿ ನೆಮ್ಮದಿಯ ಜೀವನ ನಡೆಸುವ ಸಮಯದಲ್ಲಿ ಒಂದಲ್ಲ ಎರಡು ಲೋಕಾಯುಕ್ತ ಪ್ರಕರಣಗಳು ಬಸವರಾಜಪ್ಪ ಅವರ ಬೆನ್ನಟ್ಟಿವೆ.