ವೈದ್ಯರ ಕೃಪಾಂಕ ಗ್ರಹಣ: ಸಿಗುವುದೇ ಮೋಕ್ಷ?
ವಿಶೇಷ ವರದಿ
ಶಿವಮೊಗ್ಗ: ಆಧುನಿಕ ವೈದ್ಯ ಪದ್ಧತಿಯಡಿ ಕಾರ್ಯನಿರ್ವಹಿಸುತ್ತಿರುವ ನಾಡಿನ ಸಮಸ್ತ ವೈದ್ಯರಿಗೆ ಅಮರಿಕೊಂಡಿರುವ ಕೃಪಾಂಕ ಗ್ರಹಣದಿಂದ ಮೋಕ್ಷ ಪಡೆಯಲು ವೈದ್ಯ ಸಮುದಾಯದ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಸಿದ್ಧತೆ ನಡೆಸಿದ್ದಾರೆ.
2016ರ ಮೇ ನಂತರ ಆಧುನಿಕ ವೈದ್ಯ ಪದ್ಧತಿಯಡಿ ತಮ್ಮ ವೃತ್ತಿ ಮುಂದುವರಿಸಲು ಕರ್ನಾಟಕ ಮೆಡಿಕಲ್ ಕೌನ್ಸಿಲ್ನಲ್ಲಿ ರಾಜ್ಯದ ಎಲ್ಲಾ ವೈದ್ಯರು ಮರುನೋಂದಣಿ ಮಾಡಿಸುವುದು ಕಡ್ಡಾಯ. ಹೀಗೆ ಮರು ನೋಂದಣಿ ಮಾಡಿಸುವ ಮುನ್ನ 30 ಕ್ರೆಡಿಟ್ ಅಂಕಗಳೊಂದಿಗೆ ಪ್ರಮಾಣಪತ್ರ ಪಡೆದುಕೊಳ್ಳುವುದು ಅನಿವಾರ್ಯ. ಅಂಕ ಪಡೆದುಕೊಳ್ಳುವುದಕ್ಕಾಗಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ನಿಂದ ಅಂಕಿತ ಪಡೆದ ವೈದ್ಯಕೀಯ ಸಂಬಂಧಿ ಸಮ್ಮೇಳನ, ಕಾರ್ಯಾಗಾರದಲ್ಲಿ ವೈದ್ಯ ಸಮುದಾಯ ಪಾಲ್ಗೊಳ್ಳಬೇಕು. ಪಾಲ್ಗೊಂಡು ಪ್ರಮಾಣಪತ್ರ ಪಡೆಯಬೇಕು. ಪ್ರತಿ ಕಾರ್ಯಕ್ರಮಕ್ಕೆ ಮೆಡಿಕಲ್ ಕೌನ್ಸಿಲ್ ಕ್ರೆಡಿಟ್ ಅವಧಿ ನಿಗದಿಪಡಿಸಿರುತ್ತದೆ.
ಸಂಕಟ: ಇಂದಿನ ವಿದ್ಯಮಾನ ಮತ್ತು ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ವೈದ್ಯರಿಗೆ ತಮ್ಮ ಜ್ಞಾನ ಹೆಚ್ಚಿಸಲು ಅನೇಕ ಅವಕಾಶಗಳಿವೆ. ಕರ್ನಾಟಕ ವೈದ್ಯಕೀಯ ಪರಿಷತ್ ಗುರುತಿಸಿರುವ ಅಂಕಗಳ ನಿಯಮ ಈ ಯಾವುದೇ ಅಂಶಗಳನ್ನೂ ಪರಿಗಣಿಸದೆ ಕೇವಲ ಪರಿಷತ್ ಗುರುತಿಸುವ ಕಾರ್ಯಕ್ರಮಗಳನ್ನು ಮಾತ್ರ ಕಲಿಕಾ ಅಂಶಗಳಿಗೂ ತನ್ಮೂಲಕ ಮರು ನೋಂದಣಿಗೆ ಅರ್ಹವೆಂದು ಪರಿಗಣಿಸಿರುವುದು ಸರಿಯಲ್ಲ ಎಂದು ಶಿವಮೊಗ್ಗದ ಹಿರಿಯ ಸರ್ಕಾರಿ ವೈದ್ಯರೊಬ್ಬರು ಅಭಿಪ್ರಾಯಪಡುತ್ತಾರೆ.
ಶಿವಮೊಗ್ಗದಲ್ಲೇನೋ ಐಎಂಎ ಕ್ರೆಡಿಟ್ ಅವರ್ ನೀಡುವಂತೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಇಲ್ಲಿನ ವೈದ್ಯರು ಮನಸ್ಸಿಲ್ಲದಿದ್ದರೂ ಪಾಲ್ಗೊಲ್ಳುತ್ತಿದ್ದಾರೆ. ಬೇರೆ ಜಿಲ್ಲೆ, ತಾಲೂಕು, ಗ್ರಾಮೀಣ ಮಟ್ಟದ ವೈದ್ಯರು ಏನು ಮಾಡಬೇಕು, ಊರಿಗೊಬ್ಬ ವೈದ್ಯರು ಕ್ರೆಡಿಟ್ ಅವರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ರೋಗಿಗಳ ಗತಿ ಎಂದೂ ಅವರು ಪ್ರಶ್ನಿಸಿದ್ದಾರೆ.
ಒಟ್ಟಾರೆ ಎಲ್ಲಾ ಸಂಕಟ, ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಗಣಿಸಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ನ ವೈದ್ಯರ ಮರು ನೋಂದಣಿ ರೂಪುರೇಷೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಮೆಡಿಕಲ್ ಕೌನ್ಸಿಲ್ಗೆ ನಿಯಮ ಬದಲಿಸುವಂತೆ ಶಿವಮೊಗ್ಗ ಐಎಂಎ ಮನವಿ ಮಾಡಿದೆ. ಇದೀಗ ಐಎಂಎ ನೇತೃತ್ವದಲ್ಲಿ ನ್ಯಾಯಾಲಯದ ಮೆಟ್ಟಿಲೇರಬೇಕೋ ಅಥವಾ ಪ್ರತ್ಯೇಕವಾಗಿ ವೈದ್ಯರ ತಂಡ ನ್ಯಾಯಾಲಯಕ್ಕೆ ಹೋಗಬೇಕೋ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ.
ಪ್ರಮಾಣಪತ್ರ ಅನಿವಾರ್ಯ
ಸರ್ಕಾರದ ನಿಯಮದ ಪ್ರಕಾರ ಕ್ರೆಡಿಟ್ ಅವರ್ ಪ್ರಮಾಣಪತ್ರ ಪಡೆದುಕೊಳ್ಳುವುದು ವೈದ್ಯರಿಗೆ ಅನಿವಾರ್ಯ. ಕ್ರೆಡಿಟ್ ಅವರ್ ಪ್ರಮಾಣ ಪತ್ರಕ್ಕಾಗಿ ಅನಿವಾರ್ಯವಾಗಿ ತಮ್ಮ ಜ್ಞಾನಶಾಖೆಯಲ್ಲದ ಕಾರ್ಯಕ್ರಮದಲ್ಲಿ ಕೆಲಸ ಕಾರ್ಯ ಬಿಟ್ಟು ಪಾಲ್ಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಐದು ವರ್ಷಗಳಿಗೊಮ್ಮೆ ಮರು ನೋಂದಣಿ ಮಾಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂಬುದು ಶಿವಮೊಗ್ಗ ಐಎಂಎ ಅಧ್ಯಕ್ಷೆ ಡಾ. ವಾಣಿ ಕೋರಿಯವರ ಅಭಿಪ್ರಾಯ. ಆದರೆ, ಈಗಿರುವ ಮಾರ್ಗಸೂಚಿ ಸರಿಯಾಗಿಲ್ಲ ಎಂದವರು ಹೇಳಿದ್ದಾರೆ.
ತೂಗುಕತ್ತಿ ಇಳಿಸಲು ಸರ್ಕಾರದ ಮೊರೆ
ವಿದೇಶದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ವೈದ್ಯರು ಪರೀಕ್ಷೆ ಬರೆದು ನಮ್ಮ ನೋಂದಣಿ ಮರು ನವೀಕರಣ ಮಾಡಿಸಿಕೊಳ್ಳುತ್ತಾರೆ. ಅದೇ ರೀತಿ ಮಾನದಂಡವನ್ನು ತರಲು ಹೊರಟ ಮೆಡಿಕಲ್ ಕೌನ್ಸಿಲ್ ಆದೇಶಕ್ಕೊಂದು ಮಾರ್ಗಸೂಚಿ ಹೊರತಂದಿತು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ಗುಜರಾತ್ ಸೇರಿದಂತೆ ಕೆಲವು ರಾಜ್ಯಗಳು ಮಾರ್ಗಸೂಚಿ ಒಪ್ಪಿ ರಾಜ್ಯಮಟ್ಟದಲ್ಲಿ ಪ್ರತ್ಯೇಕ ರೂಪುರೇಷೆ, ಮಾನದಂಡ ರಚಿಸಿಕೊಂಡವು. ಅದರಂತೆ ಮೊದಲ ಹಂತದಲ್ಲಿ 2016ರ ಮೇನಲ್ಲಿ ವೈದ್ಯರು ಮರು ನೋಂದಣಿ ಮಾಡಿಸಿಕೊಳ್ಳಬೇಕು.
ಈ ಮಧ್ಯೆ ಕೇರಳ ಸರ್ಕಾರದ ನಿರ್ಧಾರ ವಿರೋಧಿಸಿ ಅಲ್ಲಿನ ವೈದ್ಯರು ನ್ಯಾಯಾಲಯದ ಮೆಟ್ಟಿಲೇರಿದರು. ಆದರೆ, ಕರ್ನಾಟಕದಲ್ಲಿ ಮಾತ್ರ ನಿಯಮಗಳ ಪಾಲನೆ ಕಳೆದೊಂದು ವರ್ಷದಿಂದ ಆರಂಭವಾಯಿತು.
ಶಿವಮೊಗ್ಗ ಐಎಂಎ ಕರ್ನಾಟಕ ಮೆಡಿಕಲ್ ಕೌನ್ಸಿಲ್ನಿಂದ ಅಂಕಿತ ಪಡೆದು ಹಲವು ಕ್ರೆಡಿಟ್ ಅವರ್ ಕಾರ್ಯಕ್ರಮ ರೂಪಿಸಿತು. ಶಿವಮೊಗ್ಗ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ವೈದ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಕ್ರೆಡಿಟ್ ಅವರ ಪ್ರಮಾಣಪತ್ರ ಗಿಟ್ಟಿಸಿಕೊಂಡರು.
ಆದರೆ, ದಿನದಿನಕ್ಕೂ ಕ್ರೆಡಿಟ್ ಅವರ್ ತಲೆಬಿಸಿ ಹೆಚ್ಚಾಗುತ್ತಿದ್ದಂತೆಯೇ ವೈದ್ಯ ಸಮುದಾಯ ಪರ್ಯಾಯ ಆಲೋಚನೆ ಆರಂಭಿಸಿದೆ. ತಮ್ಮ ತಲೆ ಮೇಲೆ ತೂಗುತ್ತಿರುವ ಕತ್ತಿ ಇಳಿಸುವಂತೆ (ಮಾರ್ಗಸೂಚಿ ತಿದ್ದುಪಡಿಗಾಗಿ) ಸರ್ಕಾರದ ಮೊರೆ ಹೋಗಿದ್ದು ಒಂದು ಕಡೆಯಾದರೆ, ಇನ್ನೊಂದೆಡೆ ನ್ಯಾಯಾಲಯದ ಮೊರೆ ಹೋಗಲು ಸಹ ತಯಾರಿ ಮಾಡಿಕೊಳ್ಳಲಾರಂಭಿಸಿದೆ.