ರೋಗಿ ಕಡೆಯವರ ಅತಿರೇಕದ ವರ್ತನೆ ವೈದ್ಯರು, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ...
ಸಾಗರ: ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ಬಿ.ಜಿ.ಸಂಗಂ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ನಡೆದು, ಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೋಗಿಗಳ ಕಡೆಯವರ ಅತಿರೇಕದ ವರ್ತನೆಯಿಂದ ವೈದ್ಯರು ಮತ್ತು ವೈದಕೀಯ ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿರುವ ಘಟನೆಗಳ ಬಗ್ಗೆ ಸಮಿತಿ ಖಂಡನಾ ನಿರ್ಣಯ ಕೈಗೊಂಡಿತು.
ಕೆಲವು ದಿನಗಳ ಹಿಂದೆ ಸಿಗಂದೂರು ಪ್ರವಾಸಿಗರು ಹೊಳೆಬಾಗಿಲಿನಲ್ಲಿ ಅಪಘಾತಕ್ಕೆ ತುತ್ತಾಗಿದ್ದಾಗ ಸ್ಥಳದಲ್ಲಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಹಾಗೂ ಸಂಗಡಿಗರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಕುರಿತು ಚರ್ಚಿಸಲಾಯಿತು.ಶ್ರೀಕಾಂತ್ ಅವರ ಮಾನವೀಯ ಗುಣದ ಬಗ್ಗೆ, ಅಪಘಾತಕ್ಕೆ ಒಳಗಾದವರನ್ನು ರಕ್ಷಿಸಿರುವ ಬಗ್ಗೆ ಗೌರವವಿದೆ. ಆದರೆ ಅವರು ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆಸಿರುವ ಹಲ್ಲೆ ಖಂಡನೀಯ ಎಂದು ಸಮಿತಿ ಸದಸ್ಯ ಅರುಣಕುಮಾರ್ ಗಡಿಕಟ್ಟೆ ಹಾಗೂ ನಟರಾಜ್ ಹೇಳಿದರು.
ಮತ್ತೊಬ್ಬ ಸದಸ್ಯ ಶಂಕರ್ ಅಳವೆಕೋಡಿ, ಆರೋಪ ಪ್ರತ್ಯಾರೋಪಗಳ ಹೊರತಾಗಿ ಆಸ್ಪತ್ರೆಯ ಉತ್ತಮ ವಾತವರಣ ನಿರ್ಮಾಣಕ್ಕೆ ಪೂರಕವಾಗಿ ತುರ್ತು ಚಿಕಿತ್ಸಾ ಘಟಕದಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವುದಾಗಿ ವೈದ್ಯಾಧಿಕಾರಿ ಡಾ.ಸಂಗಂ ಸಭೆಗೆ ಮಾಹಿತಿ ನೀಡಿದರು.
ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳ ಕಡೆಯವರ ಉಪಟಳ ಹೆಚ್ಚಾಗಿ ವೈದ್ಯರು ಕರ್ತವ್ಯ ನಿರ್ವಹಣೆಗೆ ಅಡಚಣೆಯಾಗುತ್ತಿದೆ. ವೈದಕೀಯ ಚಿಕಿತ್ಸೆಗಳ ಬಗ್ಗೆ ಜ್ಞಾನವೇ ಇಲ್ಲದವರ ಪ್ರಶ್ನೆಗಳು, ದಬ್ಬಾಳಿಕೆಗಳಿಗೆ ಉತ್ತರಿಸಲು ಇರುವ ಒಬ್ಬಿಬ್ಬರು ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೋಗಿಗಳ ಹೊರತಾಗಿ ಹೆಚ್ಚಿನ ಜನ ತುರ್ತು ಚಿಕಿತ್ಸಾ ವಿಭಾಗಕ್ಕೆ ಪ್ರವೇಶ ಮಾಡದಂತೆ ಕಬ್ಬಿಣ ಸರಳುಗಳ ಬಾಗಿಲು ನಿರ್ಮಿಸಲು ಸದಸ್ಯ ನಟರಾಜ್
ನೀಡಿದ ಸಲಹೆಯನ್ನು ಸಭೆ ಅಂಗೀಕರಿಸಿತು.
ತುರ್ತು ಚಿಕಿತ್ಸಾ ಘಟಕದಲ್ಲಿ ಕೇವಲ 5 ಹಾಸಿಗೆಗಳಿರುವುದರಿಂದ ಬಸ್ ಅಥವಾ ಹೆಚ್ಚು ಜನರಿರುವ ವಾಹನ ಅಪಘಾತಗಳಾದಾಗ ಏಕಕಾಲದಲ್ಲಿ ಚಿಕಿತ್ಸೆಗೆ ಆಗಮಿಸುವ ಗಾಯಾಳುಗಳಿಗೆ ಚಿಕಿತ್ಸೆ ಸಾಧ್ಯವಾಗದು. ಪ್ರಯುಕ್ತ 10 ರಿಂದ 15 ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲು ವಿಧಾನಸಭಾಧ್ಯಕ್ಷರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಯಿತು.
ಆಸ್ಪತ್ರೆ ಸಮಿತಿಯವರ ಹೆಸರು ಮತ್ತು ಮೊಬೈಲ್ ನಂಬರ್ ಇರುವ ನಾಮಫಲಕವನ್ನು ಆಸ್ಪತ್ರೆಯಲ್ಲಿ ಅಳವಡಿಸಿ, ಸಾರ್ವಜನಿಕರಿಂದ ಸಮಸ್ಯೆಯಾದಾಗ ಸಮಿತಿ ಸದಸ್ಯರನ್ನು ಕರೆಯಿಸಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂಬ ಸಲಹೆ ಜಾರಿಗೆ ತರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯ ಜಯರಾಮ್, ಡಾ.ಪ್ರಕಾಶ್ಬೋಸ್ಲೆ, ಡಾ.ಜಯಲಕ್ಷ್ಮಿ, ಸಿಬ್ಬಂದಿ ಲೋಹಿತ್ ಇತರರು ಇದ್ದರು.