ಹಲವೆಡೆ ರಸ್ತೆ ಸಂಪರ್ಕ ಕಡಿತ
ಸೊರಬ: ಮಳೆಯ ಅರ್ಭಟ ಮುಂದುವರಿದಿದ್ದು, ನದಿ, ಹಳ್ಳ ಪ್ರದೇಶಗಳಲ್ಲಿ ಇನ್ನಷ್ಟು ನೆರೆ ಏರಿದೆ.
ತಾಲೂಕಿನ ಉದ್ರಿ ಗ್ರಾಮ ಮಾರ್ಗದಲ್ಲಿನ ಯಲವಾಟದ ಮಲ್ಲಿಗೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಕೊರಕೋಡು, ಎಡಗೊಪ್ಪ, ಜಮೀನುಗಳು ಜಲಾವೃತಗೊಂಡಿದೆ. ಸೊರಬ- ಉದ್ರಿ ಮಾರ್ಗ ಕಡಿದಿತ್ತು. ಹಶ್ವಿ ಬಳಿ ಶಿಡ್ಡಿಹಳ್ಳಿಯ ಸೇತುವೆ ಮೇಲೆ ನೀರು ಹರಿದು ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಕಳೆದುಕೊಂಡಿದೆ. ಮಡ್ಡಿಕುಂಬ್ರಿ ಗ್ರಾಮಕ್ಕೆ ನೀರು ಸುತ್ತುವರಿದಿದ್ದು, ರಸ್ತೆ ಸಂಪರ್ಕ ಕಡಿದುಕೊಂಡಿದೆ. ಹೊನ್ನೆಕಟ್ಟೆ ಕೆರೆ ತುಂಬಿ ಸೊರಬ- ಆನವಟ್ಟಿ ರಸ್ತೆ ಮೇಲೆ ನೀರು ನಿಂತಿದ್ದು, ಚಾಲಕರು ಪರದಾಡುವಂತಾಗಿದೆ. ಶಿಡ್ಡಿಹಳ್ಳಿ, ಹೊಸಳ್ಳಿ, ಕಾತುವಳ್ಳಿ, ಕೋಟೆಕೊಪ್ಪ, ಬೆನ್ನೂರು ಗ್ರಾಮಗಳ ಸಂಪರ್ಕ ಕಳೆದುಕೊಂಡಿದೆ. ಕುಪ್ಪಗಡ್ಡೆ ಹೋಬಳಿಯ ಕಾನ್‌ಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಫಕ್ಕೀರಪ್ಪ ಎಂಬವರ ಒಂದು ಎಕರೆ ಶುಂಠಿ ಬೆಳೆಗೆ ಹಾನಿಯಾಗಿದೆ. ಇದೇ ಗ್ರಾಮದ ಈರಪ್ಪ ಬಿನ್ ಸೋಮಪ್ಪ ಅವರ ಮನೆ ಗೋಡೆ ಕುಸಿದು ಬಿದ್ದಿದೆ. ದಂಡಾವತಿ ಮತ್ತು ವರದಾ ನದಿಗಳ ಪ್ರವಾಹದಿಂದ ವಿದ್ಯುತ್ ಕಂಬಗಳು ಬಿದ್ದಿದ್ದು, ಬಸ್ತಿಕೊಪ್ಪ, ಮಂಗರ್ಶಿಕೊಪ್ಪ, ಕುಪ್ಪಗಡ್ಡೆ ಕುಂಬ್ರಿ, ಮಡ್ಡಿಕುಂಬ್ರಿ ಸೇರಿದಂತೆ ಉಳವಿ, ಚಂದ್ರಗುತ್ತಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿದಿದೆ.
ಜಂಗಿನಕೊಪ್ಪ- ಓಟೂರು ಮಾರ್ಗ ಮಧ್ಯೆ ಹಳ್ಳವೊಂದು ಉಕ್ಕಿ ಹರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕೋಣನಮನೆ ಹಳ್ಳ, ಕಡಸೂರು, ಚಂದ್ರಗುತ್ತಿ, ಬಂಕಸಾಣ, ಕೆರೆಹಳ್ಳಿ ಬಳಿಯ ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ಪಟ್ಟಣದಲ್ಲಿ ಶುಕ್ರವಾರ ಸಂಜೆ ವೇಳೆಗೆ 72.2 ಮಿಮೀ ಮಳೆ ಸುರಿದಿದೆ.